ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಗುರುವಾರವೂ ಪ್ರತಿಭಟನೆ ನಡೆಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾವೇಶಗೊಂಡ ಸಮಿತಿ ಸದಸ್ಯರು ತಮಿಳುನಾಡು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಪದೇ ಪದೆ ಅನ್ಯಾಯವಾಗುತ್ತಲೇ ಇದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ಕಾವೇರಿ ನಿರ್ವಹಣಾ ಪ್ರಾಧಿಕಾರ, ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಮತ್ತೆ ಆದೇಶ ನೀಡಿರುವುದು ಖಂಡನೀಯ. ಸಂಕಷ್ಟ ಸೂತ್ರ ಅನುಸರಿಸುವ ಬದಲು ತಮಿಳುನಾಡು ಪದೇ ಪದೆ ಕ್ಯಾತೆ ತೆಗೆಯುತ್ತಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ವಾಸ್ತವ ಪರಿಸ್ಥಿತಿ ಅರ್ಥ ಮಾಡಿಸುವಲ್ಲಿ ವಿಫಲವಾಗಿದೆ. ಬಿಜೆಪಿಯ 25 ಸಂಸದರು ಕೇಂದ್ರ ಮೇಲೆ ಒತ್ತಡ ಹೇರುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. 29ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಪ್ರತಿಯೊಬ್ಬರೂ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜಸ್ ಲೋಕೇಶ್ ಗೌಡ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಬಿಜೆಪಿ ಮುಖಂಡ ಜಯಪ್ರಕಾಶ್, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಡಿಪಿಕೆ ಪರಮೇಶ್, ಬೋಗಾದಿ ಸಿದ್ದೇಗೌಡ, ಮಹದೇವಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.