ಆನೇಕಲ್ : ರಾಷ್ಟ್ರೀಯ ಹೆದ್ದಾರಿ&844 ನಿರ್ಮಾಣದ ವೇಳೆ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತ ಮಾಡಿರುವುದನ್ನು ಖಂಡಿಸಿ ಹಲವು ಗ್ರಾಮಗಳ ರೈತರು ಮಾಯಸಂದ್ರ ಸಮೀಪದ ಎಂ. ಮೇಡಹಳ್ಳಿಯಲ್ಲಿ ಹೆದ್ದಾರಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
ತಮಿಳುನಾಡಿನ ಹೊಸೂರು&ಆನೇಕಲ್&ಹೊಸಕೋಟೆ ಮಾರ್ಗದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಆನೇಕಲ್ ತಾಲೂಕಿನ ಎಂ.ಮೆಡಹಳ್ಳಿ, ಹಳೆಹಳ್ಳಿ, ರಾಚಮಾನಹಳ್ಳಿ, ಬೆಸ್ತಮಾನಹಳ್ಳಿ ಜನರು ಮಾಯಸಂದ್ರವನ್ನು ಕೇಂದ್ರವನ್ನಾಗಿಸಿ ಕೊಂಡು ವ್ಯಾಪಾರ ವಹಿವಾಟು ನಡೆಸುತ್ತಾರೆ. ಆದರೆ ಹೆದ್ದಾರಿ ನಿರ್ಮಾಣದ ವೇಳೆ ರಸ್ತೆ ಮುಚ್ಚಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹಿರಿಯ ಹೋರಾಟಗಾರ ಪಟಾಪಟ್ ನಾಗರಾಜ್ ಮಾತನಾಡಿ, ಹೆದ್ದಾರಿ ಹಾದು ಹೋಗುವ ಈ ಭಾಗದಲ್ಲಿ ಅಂಡರ್ಪಾಸ್ ನಿರ್ಮಿಸಲು ನಾಲ್ಕು ಬಾರಿ ಮನವಿ ಕೊಡಲಾಗಿದೆ, ಆದರೆ ಅನಾದಿಕಾಲದಿಂದಲೂ ಇದ್ದ ರಸ್ತೆ ಮುಚ್ಚಿ ಎರಡು ಕಿಲೋ ಮೀಟರ್ ದೂರ ಹೋಗಿ ಬರುವಂತೆ ಮಾಡಲಾಗುತ್ತಿದೆ, ಹೆದ್ದಾರಿ ಪಕ್ಕದಲ್ಲಿ ಇರುವ ಸರ್ವೀಸ್ ರಸ್ತೆ ಬಳಸಿಕೊಳ್ಳುವಂತೆ ಹೇಳುತ್ತಿದ್ದು ಇದರಿಂದ ಗ್ರಾಮಕ್ಕೆ ಸಂಪರ್ಕವೇ ಇಲ್ಲದಂತೆ ಆಗುತ್ತಿದೆ. ಒಂದು ಭಾಗದಿಂದ ಇನ್ನೊಂದು ಭಾಗದಲ್ಲಿ ಇರುವ ಜಮೀನುಗಳಿಗೆ ರೈತರು ಹೋಗಲು ಸಾಧ್ಯ ಆಗದೆ ಸಾಕಷ್ಟು ಸಮಸ್ಯೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಸ್ತೆ ಮುಚ್ಚಿರುವುದರಿಂದ ವಿದ್ಯಾರ್ಥಿಗಳು ಹಾಗೂ ರೈತರು ಸಾಕಷ್ಟು ಪರದಾಡುವ ಸ್ಥಿತಿ ಆಗಿದೆ. 10 ದಿನದ ಒಳಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು.ಇಲ್ಲದಿದ್ದರೆ ಸಾವಿರಾರು ಜನರನ್ನು ಒಟ್ಟಿಗೆ ಸೇರಿಸಿ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಾವಯುವ ಕೃಷಿಕ ಮೇಡಹಳ್ಳಿ ಮುರುಗೇಶ್ ಮಾತನಾಡಿ, ಮೇಲ್ಸೇತುವೆ ಮಾಡುವವರೆಗೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದರು.
ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ 844ರ ಪ್ರಾಜೆಕ್ಟ್ ಡೈರೆಕ್ಟರ್ ರಮೇಶ್ ಮಾತನಾಡಿ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ರೈತರ ಬೇಡಿಕೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ, ರೈತರಿಗೆ ತೊಂದರೆ ಕೊಡುವ ಯಾವ ಉದ್ದೇಶ ನಮಗೆ ಇಲ್ಲ ಎಂದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮುರುಗೇಶ್, ಹರೀಶ್ಗೌಡ, ರಮೇಶ್, ಮಾರಪ್ಪ, ಮುನಿರಾಜು, ನಾರಾಯಣಪ್ಪ, ಮಲ್ಲೆಶ್, ದೇವರಾಜು, ಸುನೀಲ್, ಮಂಜುನಾಥ್, ಶ್ರೀನಿವಾಸ್, ರುದ್ರಪ್ಪ, ಮಾದೇಶ್, ಮಹೇಶ್ ಇದ್ದರು.
ರಸ್ತೆ ಅಗೆಯಲು ಮುಂದಾದರು : ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವು ರೈತರು ಜೆಸಿಬಿ ಜತೆ ಹೆದ್ದಾರಿ ಆಗೆದ್ದು ಮೊದಲು ಇದ್ದ ರಸ್ತೆಯನ್ನು ಮತ್ತೆ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅತ್ತಿಬಲೆ ಪೊಲೀಸ್ ಇನ್ಸ್ಪೆಕ್ಟರ್ ರಾವ ಗೌಡ ತಡೆದು ಎಚ್ಚರಿಸಿ ಸ್ಥಳದಿಂದ ವಾಪಸ್ ಕಳುಹಿಸಿದರು.
ಹೆದ್ದಾರಿ ಮಧ್ಯೆ ಬಿರಿಯಾನಿ ತಯಾರಿ : ಪ್ರತಿಭಟನೆ ಹಿನ್ನೆಲೆಯಲ್ಲಿ ನೂರಾರು ರೈತರು ಜಮಾಯಿಸಿ ಹೆದ್ದಾರಿ ಮಧ್ಯೆ ಬಿರಿಯಾನಿ ತಯಾರಿಸಿ ಮಾಡಿ ಊಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು, ಪಾತ್ರೆಗಳನ್ನು ಮನೆಯಿಂದ ತಂದು ಹೆದ್ದಾರಿಯಲ್ಲಿ ಒಲೆ ನಿರ್ಮಾಣ ಮಾಡಿ ಅಡುಗೆ ಮಾಡಲಾಯಿತು.
ಮಾತಿನ ಚಿಕಮಕಿ : ಪ್ರತಿಭಟನೆ ವೇಳೆ ಕೆಲವು ಸ್ಥಳಿಯರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳಿಯ ರೈತರು ಹಾಗೂ ಅಧಿಕಾರಿಗಳ ಪರ ಮಾತನಾಡಲು ಬಂದವರ ನಡುವೆ ಮಾತಿನ ಚಕಮತಿ ನಡೆಯಿತು.
ನಮ್ಮದೇ ಊರಿನ ರೈತರ ಜಮೀನಿಗೆ ಹೋಗಬೇಕಾದರೆ ನಾಲ್ಕು ಕಿಲೋಮೀಟರ್ ಹೋಗಿ ಬರಲು ಸಾಧ್ಯವಿಲ್ಲ, ಕೆಲಸಕ್ಕೆ ಬರುವ ಕಾರ್ಮಿಕರಿಗೆ ಸಮಸ್ಯೆ ಆಗುತ್ತದೆ, ರಸ್ತೆ ಬಿಡದೆ ಅಧಿಕಾರಿಗಳು ರೈತರನ್ನು ಹಿಂಸೆಗೆ ಸಿಲುಕಿಸುವುದು ಸರಿಯಲ್ಲ. > ಹರೀಶ್ಗೌಡ ಕಾಂಗ್ರೆಸ್ ಯುವ ಮುಖಂಡ