ಪಾಂಡವಪುರ: ಉಪನೋಂದಣಾಧಿಕಾರಿಗಳ ಕಚೇರಿ ಅವ್ಯವಸ್ಥೆಗಳ ಆಗರವಾಗಿದ್ದು, ಸಾರ್ವಜನಿಕರಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.
ಸಬ್‌ರಿಜಿಸ್ಟ್ರಾರ್ ಕಚೇರಿ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು ನೋಂದಣಾಧಿಕಾರಿಗಳ ಕಚೇರಿ ಮೊದಲನೇ ಮಹಡಿಯಲ್ಲಿದ್ದು, ವೃದ್ಧರು, ಅಂಗವಿಕಲರು, ದೈಹಿಕ ನಿಶಕ್ತರು ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ತಮ್ಮ ಆಸ್ತಿ ನೊಂದಣಿ, ಮಾರಾಟ ಇನ್ನಿತರ ವಿಚಾರವಾಗಿ ನೂರಾರು ಸಂಖ್ಯೆಯ ಸಾರ್ವಜನಿಕರು ಇಲ್ಲಿಗೆ ಆಗಮಿಸುತ್ತಾರೆ. ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಕುರ್ಚಿ, ಶೌಚಗೃಹದ ವ್ಯವಸ್ಥೆ ಸೇರಿದಂತೆ ಸಮರ್ಪಕ ಮೂಲಸೌಕರ್ಯ ಕಲ್ಪಿಸಿಲ್ಲ. ಅಧಿಕಾರಿಗಳಿಗೆ ಮಾತ್ರ ಶೌಚಗೃಹವಿದ್ದು, ಸಾರ್ವಜನಿಕರಿಗೆ ಇಲ್ಲವಾಗಿದೆ. ಕಚೇರಿಗೆ ಬರುವ ಸಾರ್ವಜನಿಕರು ಬಹಿರ್ದೆಸೆಗೆ ಎಲ್ಲಿಗೆ ಹೋಗಬೇಕು? ಎಂದು ಪ್ರತಿಭಟನಾಕಾರರು ಉಪನೋಂದಣಿಧಿಕಾರಿ ವೆಂಕಟೇಶ್ ಅವರನ್ನು ಪ್ರಶ್ನಿಸಿದರು.
ಬಿಜೆಪಿ ರೈತ ಮೋರ್ಚಾ ಮಾಜಿ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಪಟ್ಟಣದಲ್ಲಿ ಸಬ್‌ರಿಜಿಸ್ಟ್ರಾರ್‌ಕಚೇರಿಗೆ ಸೇರಿದ ಸ್ಥಳವಿದ್ದು, ಅಲ್ಲಿಗೆ ಕಚೇರಿ ಸ್ಥಳಾಂತರಿಸಬೇಕು. ಮೊದಲನೇ ಮಹಡಿಯಲ್ಲಿರುವ ಕಚೇರಿಯಿಂದ ಸಾರ್ವಜನಿಕವಾಗಿ ತೊಂದರೆಯಾಗುತ್ತಿದೆ. ಜತೆಗೆ ಜನದಟ್ಟಣೆ ಹೆಚ್ಚಾಗಿರುವ ಕಾರಣ ಕಚೇರಿಗೆ ಬರುವ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಸಿಗದೆ ಪರದಾಡುತ್ತಿದ್ದಾರೆ. ಈಗಿರುವ ಕಚೇರಿಗೆ ಬಾಡಿಗೆ ತೆರಬೇಕಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಹೀಗಾಗಿ ಇಲಾಖೆಗೆ ಸೇರಿದ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಬೇಕು. ಈ ಎಲ್ಲ ವಿಚಾರಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಕ್ರಮವಹಿಸಿ ಮಾಹಿತಿ ತಿಳಿಸಬೇಕು. ಇಲ್ಲಾವಾದರೆ ಮುಂಬರುವ ಗುರುವಾರ ಹೆದ್ದಾರಿ ಸಂಚಾರ ತಡೆದು ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಉಪನೋಂದಣಾಧಿಕಾರಿ ವೆಂಕಟೇಶ್ ಮಾತನಾಡಿ, ಕಚೇರಿಯನ್ನು ನೆಲಮಹಡಿಗೆಗೆ ಸ್ಥಳಾಂತರಿಸುವಂತೆ ಕೋರಿ ಈಗಾಗಲೇ ಮೇಲಧಿಕಾರಿಗಳಿಗೆ ಪತ್ರ ಮುಖೇನಾ ಮನವಿ ಸಲ್ಲಿಸಲಾಗಿದೆ. ಜತೆಗೆ ಮೂಲಸೌಕರ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಬಿಜೆಪಿ ಮುಖಂಡರಾದ ದೊರೆಸ್ವಾಮಿ, ಕಡಬ ಪುಟ್ಟರಾಜು ಹೊನ್ನಗಿರಿಗೌಡ, ಪದ್ದಣ್ಣ, ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಎನ್,ಭಾಸ್ಕರ್, ಆನಂತ ಪದ್ಮನಾಭ, ಚಂದ್ರಶೇಖರ್ ಇತರರು ಇದ್ದರು.