ಜಿಲ್ಲೆ

24ರಂದು ಆಟೋ ರಿಕ್ಷಾ ಚಾಲಕರಿಂದ ಪ್ರತಿಭಟನೆ

Mysuru

ಮೈಸೂರು: ಎರಡು ವರ್ಷದಿಂದ ರ‌್ಯಾಪಿಡೋ ವೈಟ್ ಬೋರ್ಡ್ ಸ್ಕೂಟರ್ ಹಾಗೂ ಬೈಕ್‌ಗಳು ಆರ್‌ಟಿಒ ನಿಯಮ ಉಲ್ಲಂಘಿಸಿ ನಗರದ ಆಟೋ ರಿಕ್ಷಾ ಪರಿಮಿತಿಯೊಳಗೆ ಸಂಚರಿಸುತ್ತಿವೆ. ಇದರಿಂದಾಗಿ ಆಟೋ ರಿಕ್ಷಾ ಚಾಲಕರಿಗೆ ತೊಂದರೆ ಉಂಟಾಗಿದ್ದು, ಸರ್ಕಾರ ಇವುಗಳ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಫೆ.24ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮೈಸೂರು ಆಟೋರಿಕ್ಷಾ ಸರ್ವೀಸ್ ಟ್ರಸ್ಟ್ ಅಧ್ಯಕ್ಷ ಬಿ. ನಾಗರಾಜು ತಿಳಿಸಿದರು.


ಆರ್‌ಟಿಒ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರಿಗೆ ಅದಾಲತ್ ನಡೆಸಿ ಕಾನೂನು ಕ್ರಮ ಜರುಗಿಸಿದ ಸಂದರ್ಭದಲ್ಲಿ ರ‌್ಯಾಪಿಡೋ ಕಂಪನಿಯವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಈ ತಡೆಯಾಜ್ಞೆ ತೆರವುಗೊಳಿಸಿ ಆಟೋ ಚಾಲಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಬಾರಿ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸಲಾಗುವುದೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫೆ.24ರಂದು ನಗರದ ಎಲ್ಲ ಆಟೋ ರಿಕ್ಷಾ ಚಾಲಕರು ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆಂದರು. ಕಾನೂನು ಸಲಹೆಗಾರ ಎಂ.ಆರ್.ಸೂರ್ಯಕುಮಾರ್, ಮುಖಂಡರಾದ ಲಕ್ಷ್ಮೀನಾರಾಯಣ್, ಸೋಮನಾಯಕ, ಎಂ.ಬಿ.ದೊಡ್ಡದೇವಪ್ಪ, ಮಂಜುನಾಥ್ ಹಾಜರಿದ್ದರು.