ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ಬಳ್ಳಾರಿಯ ಕಾಗೆಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು. ಮುಖಂಡರಾದ ಮಂಜುಳಾ, ಲತಾ, ಸೌಮ್ಯಾ, ರುದ್ರಮ್ಮ, ವೆಂಕಟಲಕ್ಷ್ಮೀ, ರತ್ನಮ್ಮ ಮುಂತಾದವರು ಇದ್ದರು.  
ಜಿಲ್ಲೆ

ಅಕ್ಷರ ದಾಸೋಹ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Bellari - Heera Nayak

ಬಳ್ಳಾರಿ: ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಚುನಾವಣೆಗಳು, ಮಾತೃವಂದನಾ, ಪೋಷಣ್ ಕಾರ್ಯಕ್ರಮ, ಸರ್ವೇ, ಗೃಹಲಕ್ಷ್ಮೀ ಮುಂತಾದ ಕೆಲಸಗಳನ್ನು ಹೇರಿ ಅಂಗನವಾಡಿ ಹಾಗೂ ಅಕ್ಷರ ದಾಸೋಹ ಕಾರ್ಯಕರ್ತೆರನ್ನು ಹಿಂಡಿ ಹಿಪ್ಪೆ ಮಾಡಲಾಗುತ್ತಿದೆ ಎಂದು ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ 1 ಕೋಟಿ ನೌಕರರಿಗೆ ಕನಿಷ್ಟ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರು ಎಂದು ಪರಿಗಣಿಸಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸಬೇಕು.

49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 21 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರ ಸಿಬ್ಬಂದಿಗೆ 31 ಸಾವಿರ ರೂ. ಕನಿಷ್ಟ ವೇತನ, ನಿವೃತ್ತಿ ಸೌಲಭ್ಯಗಳನ್ನು ಕನಿಷ್ಟ 10 ಸಾವಿರ ರೂ. ಪಿಂಚಣಿ ಕೊಡಬೇಕು. ಗುತ್ತಿಗೆ, ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಹೊಸ ಮೊಬೈಲ್‌ಗಳನ್ನು ಕೊಡಬೇಕು ಮತ್ತು ಮೊಬೈಲ್‌ನಲ್ಲಿ ಮಾಹಿತಿ ಕೊಟ್ಟ ನಂತರ ಪುಸ್ತಕದಲ್ಲಿ ಬರೆಯುವುದನ್ನು ನಿಲ್ಲಿಸಬೇಕು.

6 ವರ್ಷದೊಳಗಿನ ಮಕ್ಕಳನ್ನು ಸಂರಕ್ಷಿಸುವ ಕೆಲಸ ಪ್ರಮುಖವಾಗಿರುವುದರಿಂದ ಚುನಾವಣೆಗಳು ಮತ್ತು ಇತರ ಸರ್ವೇ ಕೆಲಸಗಳಿಗೆ ಬಳಕೆ ಮಾಡಬಾರದು ಎಂದು ಮನವಿ ಮಾಡಿದರು.
ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಅಂಗನವಾಡಿ ಕೇಂದ್ರಗಳಾಗಿ ಪರಿವರ್ತಿಸಬೇಕು. ಕಡಿತವಾಗಿರುವ ಅನುದಾನಗಳನ್ನು ವಾಪಸ್ ಕೊಟ್ಟು, ಬೆಲೆಯೇರಿಕೆ ಆಧಾರದಲ್ಲಿ ಪೂರಕ ಪೌಷ್ಟಿಕ ಆಹಾರಕ್ಕೆ ಕೊಡುವ ಹಣವನ್ನು ಹೆಚ್ಚಳ ಮಾಡಬೇಕು. 2022 ಏಪ್ರಿಲ್‌ನಲ್ಲಿ ಸುರ್ಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪಿನಂತೆ ಎಲ್ಲ ಅಂಗನವಾಡಿ ನೌಕರರನ್ನು ಉದ್ಯೋಗಸ್ಥರೆಂದು ಪರಿಗಣಿಸಿ ಗ್ರಾಜ್ಯುಟಿ ಕಾಯ್ದೆಯನ್ನು ದೇಶದೆಲ್ಲೆಡೆ ಜಾರಿ ಮಾಡಬೇಕು.

29 ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕ ಪರವಾದ ನೀತಿಗಳನ್ನು ಜಾರಿ ಮಾಡಬೇಕು. ದೇಶದ ಎಲ್ಲ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಲಾಗಿರುವ ಸಾಮಾಜಿಕ ಭದ್ರತಾ ಮಂಡಳಿಯನ್ನು ಬಲಪಡಿಸಿ ಕೇಂದ್ರ ಸರ್ಕಾರ ವಾರ್ಷಿಕ ನಿವ್ವಳ ಆದಾಯದ ಶೇ.3 ರಷ್ಟು ಅನುದಾನ ಅಂದರೆ 3 ಲಕ್ಷ ಕೋಟಿ ರೂ. ಹಣವನ್ನು ಅಸಂಘಟಿತ ಕಾರ್ಮಿಕರ ಕಾರ್ಯಕ್ರಮಗಳಿಗೆ ಘೋಷಿಸಬೇಕು. ಇ-ಶ್ರಮ್ ಯೋಜನೆಯಲ್ಲಿ ಗುರುತಿನ ಚೀಟಿ ಪಡೆದಿರುವ ಎಲ್ಲ ಅಸಂಘಟಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಸದಸ್ಯರಿಗೆ ಉಚಿತ ಶಿಕ್ಷಣ, ಆರೋಗ್ಯ, ಪಡಿತರ ಹಾಗೂ ವಸತಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ದೇಶದ ಎಲ್ಲ ರಾಜ್ಯಗಳಲ್ಲಿ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ರಾಜ್ಯದಲ್ಲಿ ಕೆಲಸದ ಅವಧಿಯ ಹೆಚ್ಚಳವನ್ನು ತಂದಿರುವ ಕಾರ್ಖಾನೆ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು. ಕೆಲಸದ ಅವಧಿ ಹೆಚ್ಚಿಸುವ ಮಹಿಳೆಯರನ್ನು ರಾತ್ರಿಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ನೀಡುವುದು ಸೇರಿದಂತೆ ಎಲ್ಲ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು ಒತ್ತಾಯಿಸಿದರು.

ನೌಕರರಿಗೆ ಗ್ರಾಜ್ಯುಟಿ ಹಣವನ್ನು ಪಾವತಿಸಬೇಕು. 2023 ರ ವಿಧಾನ ಸಭೆ ಚುನಾವಣೆಯಲ್ಲಿ ಕೊಟ್ಟ ಕಾಂಗ್ರೆಸ್‌ನ ಆರು ಗ್ಯಾರಂಟಿಯಂತೆ 15 ಸಾವಿರ ರೂ. ವೇತನ ಹೆಚ್ಚಳ ಮತ್ತು 3-2 ಲಕ್ಷ ರೂ. ನಿವೃತ್ತಿ ಸೌಲಭ್ಯವನ್ನು ಕೂಡಲೇ ಜಾರಿ ಮಾಡಬೇಕು. 1200 ಮಿನಿ ಅಂಗನವಾಡಿ ಕೇಂದ್ರ ಪೂರ್ಣ ಕೇಂದ್ರಗಳಾಗಿ ಪರಿವರ್ತನೆಯಾದ ನಂತರ ಅಲ್ಲಿಯ ಕಾರ್ಯಕರ್ತೆಯರಿಗೆ ಪೂರ್ಣ ಕಾರ್ಯಕರ್ತೆಯೆಂದೂ ಸರ್ಕಾರ ಆದೇಶ ಕೂಡಲೇ ನೀಡಬೇಕು.

ಪಂಚಾಯತ್‌ರಾಜ್ ಇಲಾಖೆ ಪ್ರಾರಂಭಿಸಿರುವ ಕೂಸಿನ ಮನೆಯ ಫಲಾನುಭವಿಗಳು ಅಂಗನವಾಡಿ ಫಲಾನುಭವಿಗಳಾಗಿದ್ದಾರೆ. 6 ತಿಂಗಳಿಂದ 6 ವರ್ಷದ ಮಕ್ಕಳು ಅಂಗನವಾಡಿ ಫಲಾನುಭವಿಗಳಾಗಿರುವುದರಿಂದ ಅವೈಜ್ಞಾನಿಕ ಕೂಸಿನ ಮನೆಯ ಅಗತ್ಯತೆ ಇಲ್ಲ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ವೆಚ್ಚ ಮತ್ತು ಎರಡು ಕಡೆ ಫಲಾನುಭವಿಗಳಾಗುತ್ತಾರೆ ಆದ್ದರಿಂದ ಕೂಸಿನ ಮನೆ ರದ್ದು ಮಾಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ ಗರ್ಭಿಣಿ-ಬಾಣಂತಿಯರ ಆರೈಕೆ ಹೊರತು ಪಡಿಸಿ ಉಳಿದ ಕೆಲಸಗಳನ್ನು ನಿರ್ಬಂಧಿಸಬೇಕು.

ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ನೀಡಬೇಕು. ಖಾಲಿ ಹುದ್ದೆಗಳಿಗೆ ಮೂರು ತಿಂಗಳೊಳಗೆ ನೇಮಕಾತಿಯಾಗಬೇಕು ಇಲ್ಲದಿದ್ದರೆ ಹೆಚ್ಚುವರಿ ವೇತನ ಕೊಡಬೇಕು. ಮುಂಗಡವಾಗಿ ಕರೆನ್ಸಿ ಹಣ, ಕೋಳಿಮೊಟ್ಟೆ, ಬಾಡಿಗೆ, ಗ್ಯಾಸ್, ತರಕಾರಿ, ಇನ್ನಿತರ ಬಿಲ್‌ಗಳನ್ನು ತುರ್ತಾಗಿ ಪಾವತಿಸಬೇಕು ಎಂದು ಆಗ್ರಹಿಸಿದರು.

ಅಕ್ಷರ ದಾಸೋಹ ಕಾರ್ಮಿಕ ಸಂಘದ ಮುಖಂಡರಾದ ಮಂಜುಳಾ, ಲತಾ, ಸೌಮ್ಯಾ, ರುದ್ರಮ್ಮ, ವೆಂಕಟಲಕ್ಷ್ಮೀ, ರತ್ನಮ್ಮ ಮುಂತಾದವರು ಇದ್ದರು.