ಜಿಲ್ಲೆ

ಇಂದ್ರಾಳಿ ಸೇತುವೆಗಾಗಿ 'ಜೀವಂತ ಶವ' ಮೆರವಣಿಗೆ!!

ಪ್ರಶಾಂತ ಜಿ. ಭಾಗ್ವತ

ನಿತ್ಯಾನಂದ ಒಳಕಾಡು ವಿನೂತನ ಪ್ರತಿಭಟನೆ

ಬ್ರಿಡ್ಜ್​ ಕಾಮಗಾರಿ ವಿಳಂಬ ಖಂಡಿಸಿ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿನೂತನ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಉಡುಪಿಯ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಧೋರಣೆ ಖಂಡಿಸಿ ಮಾ.7ರಂದು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು.

ಇಂದ್ರಾಳಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​ ಮುಂಭಾಗದ ರಸ್ತೆಯಲ್ಲಿ ಚಟ್ಟವಿಟ್ಟು ಅದರ ಮೇಲೆ ಮಲಗಿದ ನಿತ್ಯಾನಂದ ಅವರನ್ನು ಸಮಿತಿಯ ಸದಸ್ಯರು ಶವದ ರೀತಿಯಲ್ಲೇ ಅಲಂಕರಿಸಿದರು. ಬಳಿಕ ನಾಲ್ಕು ಮಂದಿ ಹೆಗಲ ಮೇಲೆ ಹೊತ್ತು ಜಾಮೀಯಾ ಮಸೀದಿ ರಸ್ತೆ ಮುಂಭಾಗದಿಂದ ಇಂದ್ರಾಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗರ್ಡರ್​ ಬ್ರಿಡ್ಜ್​ವರೆಗೆ ಡೋಲು-ತಮಟೆ ವಾದ್ಯದೊಂದಿಗೆ 'ಜೀವಂತ ಶವ'ದ ಮೆರವಣಿಗೆ ನಡೆಸಿ ಪ್ರತಿಭಟಿಸಲಾಯಿತು.

ಅಂತಿಮ ದರ್ಶನಕ್ಕೆ ಅವಕಾಶ

ಗರ್ಡರ್​ ಬ್ರಿಡ್ಜ್​ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಜೀವಂತ ಶವವನ್ನಿಟ್ಟು, 15 ನಿಮಿಷಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಸೇತುವೆ ಕಾಮಗಾರಿಯಿಂದ ಅಪಘಾತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿ ಎಂಬ ರೀತಿಯಲ್ಲಿ ಕಲ್ಪಿತ ಪ್ರದರ್ಶನ ನಡೆಸಲಾಯಿತು. ಬಳಿಕ ಮತ್ತೆ ಜೀವಂತ ಶವವನ್ನು ಹೊತ್ತು ಸಮೀಪದಲ್ಲೇ ಇರುವ ಇಂದ್ರಾಳಿ ಹಿಂದು ರುದ್ರಭೂಮಿಗೆ ಮೆರವಣಿಗೆ ನಡೆಸಲಾಯಿತು.

ಬೊಬ್ಬೆ ಹೊಡೆದ ಸದಸ್ಯರು

ಸ್ಮಶಾನದಲ್ಲಿ ಜೀವಂತ ಶವವನ್ನಿಟ್ಟು, ಉಡುಪಿಯ ಜಿಲ್ಲಾ ನಾಗರಿಕ ಸಮಿತಿಯ ಸದಸ್ಯರು ಬೊಬ್ಬೆ ಹೊಡೆದರು. ಅಯ್ಯಯ್ಯೋ ಅನ್ಯಾಯ, ಸಾರ್ವಜನಿಕರಿಗಿಲ್ಲವೇ ನ್ಯಾಯ? ಎಂದು ಘೋಷಣೆ ಕೂಗುತ್ತ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯ ಖಂಡಿಸಿದರು.

ಪ್ರತಿಭಟನೆಯಲ್ಲಿ ಹರೀಶ್​ ಪೂಜಾರಿ, ಸಂದೀಪ್​ ಕಲ್ಮಾಡಿ, ಗಣೇಶರಾಜ್​ ಸರಳಬೆಟ್ಟು, ರಾಜೇಂದ್ರ, ವಿನಯಚಂದ್ರ, ಸತೀಶಕುಮಾರ್​, ಗಣೇಶ್​ ಮೂಡುಬೆಟ್ಟು, ಕೆ.ಬಾಲಗಂಗಾಧರ್​ ರಾವ್​. ರಾಜೀವ್​ ಕುಲಾಲ್​, ನೀತು ನಿಟ್ಟೂರು, ಯಾದವ್​ ಆಚಾರ್ಯ ದೊಡ್ಡನಗುಡ್ಡೆ, ಉರ್ಬನ್​ ಪ್ರಕಾಶ ಬ್ರಹ್ಮಗಿರಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರಧಾನಿ ಮೋದಿ, ಸಚಿವ ಗಡ್ಕರಿ ಇತ್ತ ನೋಡಲಿ

ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಎಂಟು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಈ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷ ಆಗುತ್ತ ಬಂದರೂ ಮುಗಿದಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಜನರು, ಪ್ರಯಾಣಿಕರು, ಇಂದ್ರಾಳಿಯ ಶಾಲೆಗೆ ಹೋಗುವ ಮಕ್ಕಳು ತುಂಬ ಸಮಸ್ಯೆ ಅನುಭವಿಸುತ್ತಿದ್ದಾರೆ. ಗುತ್ತಿಗೆದಾರ ನುಂಗಿಹಾಕಿದ ಗಡುವುಗಳಿಗೆ ಲೆಕ್ಕ ಇಲ್ಲ. ಜ.16ರ ಒಳಗೆ ಕಾಮಗಾರಿ ಮುಗಿಸುವುದಾಗಿ ಪೊಲೀಸ್​ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆದರೂ ಏನೂ ಪ್ರಯೋಜನ ಇಲ್ಲ. ಇಲ್ಲಿನ ಅವ್ಯವಸ್ಥೆ, ನಿರ್ಲಕ್ಷ್ಯ ಪ್ರಧಾನಿ ಮೋದಿ, ಸಚಿವ ನಿತಿನ್​ ಗಡ್ಕರಿ ಅವರಿಗೂ ತಿಳಿಯುವಂತಾಗಬೇಕು ಎಂದು ನಾನೇ ಜೀವಂತ ಶವವಾಗಿ ಪ್ರತಿಭಟಿಸಿದ್ದೇನೆ ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದರು.

ಪ್ರೇತವಾಗಿ ಬಂದು ಕುತ್ತಿಗೆ ಹಿಡಿಯುತ್ತೇನೆ

ತ್ವರಿತವಾಗಿ ಸೇತುವೆ ಕೆಲಸ ಮುಗಿಸಿ ಲೋಕಾರ್ಪಣೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರೇತವಾಗಿ ಬಂದು ಅವರ ಕುತ್ತಿಗೆ ಹಿಡಿಯುವ ಮತ್ತೊಂದು ಪ್ರತಿಭಟನೆ ಮಾಡುತ್ತೇನೆ ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಎಚ್ಚರಿಕೆ ನೀಡಿದರು.

ಮಣಿಪಾಲ ಮತ್ತು ಉಡುಪಿಯಲ್ಲಿ ಬಹಳ ಆಸ್ಪತ್ರೆಗಳಿಗೆ. ಈ ದಾರಿಯಲ್ಲಿ ಬಹಳ ಆಂಬುಲೆನ್ಸ್ ಓಡಾಡುತ್ತದೆ. ಇಂದ್ರಾಳಿ ರೈಲ್ವೆ ಸ್ಟೇಷನ್ ಇದೆ. ಪ್ರತಿದಿನ ಸಾವಿರಾರು ಜನ ಈ ರಸ್ತೆಯಲ್ಲಿ ಓಡಾಡುತ್ತಾರೆ. ಮಕ್ಕಳಿಗೆ, ಹಿರಿಯರಿಗೆ, ಸಾರ್ವಜನಿಕರಿಗೆ ಬಹಳ ಸಮಸ್ಯೆ ಆಗಿದೆ. ಮಳೆಗಾಲ ಆರಂಭವಾಗುವ ಮೊದಲೇ ಬ್ರಿಡ್ಜ್ ಕಾಮಗಾರಿ ಪೂರ್ಣಗೊಂಡು ಜನರ ಓಡಾಟಕ್ಕೆ ಉಪಯೋಗ ಆಗಬೇಕು. | ವಿನಯ ಚಂದ್ರ. ಸಾಮಾಜಿಕ ಕಾರ್ಯಕರ್ತ