ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಹಿಡನ್ ಅಜೆಂಡಾಗಳ ಬಗ್ಗೆ ಭಕ್ತರು ಎಚ್ಚೆತ್ತುಕೊಳ್ಳಬೇಕಾದುದು ಅವಶ್ಯ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾನಹಾನಿಕರ ಚಟುವಟಿಕೆಗಳ ವಿರುದ್ಧ ಕಾಸರಗೋಡಿನಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಪ್ರತಿಭಟನಾ ಮೆರವಣಿಗೆಯ ಸ್ವಾಗತ ಸಮಿತಿ ರಚನಾ ಸಭೆಯನ್ನು ಭಾನುವಾರ ಮಠದಲ್ಲಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸೆ. 7ಕ್ಕೆ ಚಾತುರ್ಮಾಸ್ಯ ವ್ರತಾಚರಣೆ ಪೂರ್ಣಗೊಳ್ಳಲಿದ್ದು, 8ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮ ಮಠದ ವತಿಯಿಂದ ಹಮ್ಮಿಕೊಂಡಿದ್ದು, ಮಠದ ಭಕ್ತರನ್ನು ಒಳಗೊಂಡಂತೆ ವಾಹನ ಜಾಥಾ ಮೂಲಕ ತೆರಳಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಾಗುವುದು. ಧರ್ಮರಕ್ಷಣಾ ಯಾತ್ರೆ ಹೆಸರಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
ವಿವಿಧ ಕ್ಷೇತ್ರಗಳ ಮುಖಂಡರಾದ ಜಯದೇವ ಖಂಡಿಗೆ, ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ.ಎಂ ಹೇರಳ, ಪ್ರೊ.ಎ.ಶ್ರೀನಾಥ್, ಮಂಜುನಾಥ ಆಳ್ವ ಮಡ್ವ, ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಮೊದಲಾದವರು ಉಪಸ್ಥಿತರಿದ್ದರು. ರಾಜನ್ ಮುಳಿಯಾರ್ ಸ್ವಾಗತಿಸಿದರು.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದಿಂದ ಭಕ್ತರಿಗೆ ನೋವುಂಟಾಗಿದೆ. ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕಾಗಿರುವ ಸಂಕಷ್ಟ ಮುಂದೆ ಇನ್ನೊಂದು ಕ್ಷೇತ್ರಕ್ಕೂ ತಟ್ಟುವ ಸಾಧ್ಯತೆಯಿದೆೆ. ಕಾಸರಗೋಡಿನಲ್ಲಿ ಅ.26ರಂದು ನಡೆಯಲಿರುವ ಬೃಹತ್ ಸಾರ್ವಜನಿಕ ಪ್ರತಿಭಟನಾ ಮೆರವಣಿಗೆಯಲ್ಲಿ ಕನಿಷ್ಠ 50 ಸಾವಿರ ಮಂದಿ ಪಾಲ್ಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು. ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ