ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಈಗಾಗಲೇ ಬಂಟ್ವಾಳ ಪೊಲೀಸರು ಪತ್ತೆ ಹಚ್ಚಿದ ಗೋ ಹಂತಕರು ನಿಜವಾದ ಪೆರ್ನೆ ಪ್ರಕರಣದ ಆರೋಫಿಗಳು ಹೌದೆನ್ನುವುದಾದರೆ ಅವರಿಗೆ ದೇಜಪ್ಪ ಮೂಲ್ಯರ ಹಟ್ಟಿಯಲ್ಲಿ ದನವಿರುವುದರ ಮಾಹಿತಿ ನೀಡಿರುವವರು ಯಾರು? ಎನ್ನುವುದನ್ನೂ ಪತ್ತೆ ಹಚ್ಚಬೇಕು. ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ನೈಜ ಆರೋಪಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದರು.
ಇಲ್ಲಿನ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ದೇಜಪ್ಪ ಮೂಲ್ಯ ಎಂಬುವರ ದನದ ಹಟ್ಟಿಯಿಂದ ಗುರುವಾರದಂದು ನಸುಕಿನಲ್ಲಿ ಗಬ್ಬದ ದನವನ್ನು ಕದ್ದೊಯ್ದ ಮಾಲೀಕನ ಜಮೀನಿನಲ್ಲೇ ವಧಿಸಿ ವಾಂಸ ಸಾಗಿಸಿದ ಪ್ರಕರಣವನ್ನು ಖಂಡಿಸಿ ಬಿಜೆಪಿ ಮತ್ತು ಹಿಂದು ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಕಡಂಬು ಎಂಬಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ನಾಯಕ ನರಸಿಂಹ ಮಾಣಿ ಮೊದಲಾದವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಪೆರ್ನೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸಂತ್ರಸ್ತ ದೇಜಪ್ಪ ಮೂಲ್ಯ ಅವರಿಗೆ ಧನಸಹಾಯ ವಿತರಿಸಲಾಯಿತು. ಕಿರಣ್ ಶೆಟ್ಟಿ, ನವೀನ್ ಪದಬರಿ, ಕೇಶವ ಸುಣ್ನಾಣ, ಪ್ರಕಾಶ್ ನಾಯಕ್, ಉಷಾ ಮುಳಿಯ, ಧನಂಜಯ್ ನಟ್ಟಿಬೈಲು, ಆದೇಶ್ ಶೆಟ್ಟಿ, ಪ್ರಸನ್ನ ಕುಮಾರ್ ಮಾರ್ಥ, ಪ್ರಸಾದ್ ಬಂಡಾರಿ, ಮುತ್ತಪ್ಪ ಸಾಲ್ಯಾನ್, ಶಾರದಾ, ಸುಮತಿ, ಜಯಂತಿ, ಸುಜಾತಾ, ನರಸಿಂಹ ನಾಯಕ್, ಉಮೇಶ್ ಸಾಮಂತ್, ಶ್ರೀಕಾಂತ್ ಮಣಿಯಾಣಿ, ಶಿವಪ್ಪ ನಾಯ್ಕ, ರಮೇಶ್ ನಾಯ್ಕ, ದೀಪಕ್ ಶೆಟ್ಟಿ, ಶರೋನ್ ನೊರೋನ್ಹಾ, ರಾಬರ್ಟ್ ಫೆರ್ನಾಂಡೀಸ್, ರಕ್ಷಿತ್ ಮತ್ತಿತರರು ಭಾಗವಹಿಸಿದ್ದರು.