ಜಿಲ್ಲೆ

ಸೆ.4ರಂದು ಜಂತರ್-ಮಂತರ್‌ನಲ್ಲಿ ಪ್ರತಿಭಟನೆ

ಆರ್.ಕೃಷ್ಣ

ಮೈಸೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ಬಂಡವಾಳಶಾಹಿ ಪರವಾದ ಏಕಸ್ವಾಮ್ಯ ಧೋರಣೆ ವಿರುದ್ಧ ಎಐಯುಟಿಯುಸಿ ವತಿಯಿಂದ ಸೆ.4ರಂದು ದೆಹಲಿಯ ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್ ತಿಳಿಸಿದರು.

ಅಖಿಲ ಭಾರತ ಮಟ್ಟದ ಕಾರ್ಮಿಕರ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಮಿಕರು, ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಮೈಸೂರು ಸೇರಿದಂತೆ ರಾಜ್ಯದಿಂದ 244 ಜನ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ 4 ಕಾರ್ಮಿಕ ಕೋಡ್‌ಗಳನ್ನು ತಕ್ಷಣ ರದ್ದುಗೊಳಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2023 ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ರದ್ದುಗೊಳಿಸಬೇಕು. ಕೆಲಸದ ಅವಧಿ ದಿನಕ್ಕೆ 8 ಗಂಟೆ, ವಾರಕ್ಕೆ 48 ಗಂಟೆ ಮೀರಬಾರದು. ಕಾಯಂ ನೌಕರರ ಸಂಖ್ಯೆ ಕಡಿತ ನಿಲ್ಲಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಏಕೀಕೃತ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಬೇಷರತ್ತಾಗಿ ಜಾರಿಗೊಳಿಸಬೇಕು. ಪಿಎಂ ಮತ್ತು ಇಎಸ್‌ಐ ಸೌಲಭ್ಯಗಳಿಗೆ ಅರ್ಹ ವೇತನ ಮಿತಿ ತೆಗೆದುಹಾಕಿ, ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಸೌಲಭ್ಯ ಖಾತ್ರಿ ಪಡಿಸಬೇಕೆಂದು ಆಗ್ರಹಿಸಲಾಗುವುದು ಎಂದರು.

ಸ್ಕೀಮ್ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ, ಅವರಿಗೆ ಎಲ್ಲ ಶಾಸನಬದ್ಧ ಸೌಲಭ್ಯ ಒದಗಿಸಬೇಕು. ವಲಸೆ ಕಾರ್ಮಿಕರಿಗೆ ಸುರಕ್ಷತೆ, ಭದ್ರತೆ ಮತ್ತು ಶಾಶ್ವತ ಉದ್ಯೋಗ ಒದಗಿಸಬೇಕು. ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಿ ಸಾಮಾಜಿಕ ಭದ್ರತೆ ಒದಗಿಸಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಅಥವಾ ನಿರುದ್ಯೋಗ ಭತ್ಯೆ ಒದಗಿಸಿ, ಕೆಲಸದ ಹಕ್ಕನ್ನು ಸಂವಿಧಾನಿಕ ಹಕ್ಕಾಗಿ ಘೋಷಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಎಂ.ಉಮಾದೇವಿ, ಜಿಲ್ಲಾಧ್ಯಕ್ಷೆ ವಿ.ಯಶೋಧರ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎಸ್.ಸಂಧ್ಯಾ, ಮುದ್ದುಕೃಷ್ಣ ಇದ್ದರು.