ಜಿಲ್ಲೆ

ಹಿರೇಕೆರೂರಲ್ಲಿ ಪ್ರತಿಭಟನೆ 8ರಂದು

ಹಿರೇಕೆರೂರ: ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ತಾಲೂಕು ಬಿಜೆಪಿ ಮಂಡಲ, ಜಿಲ್ಲಾ ರೈತ ಮೋರ್ಚಾ ವತಿಯಿಂದ ಸೆ.8ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಲಾಯಿತು.

ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ವಿದ್ಯುತ್ ಬೆಲೆ ಹೆಚ್ಚಳ, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ, ಬೇಗನೆ ಟಿಸಿ ದುರಸ್ತಿ ಮಾಡದಿರುವುದು, ಕೆರೆ ತುಂಬಿಸುವ ಯೋಜನೆಗಳ ಸಮರ್ಪಕ ಬಳಕೆಯಾಗದಿರುವುದು, ಕಿಸಾನ್ ಸಮ್ಮಾನ್ ಯೋಜನೆ ಹಣ ಬಿಡುಗಡೆ ನಿಲ್ಲಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ ಮಾತನಾಡಿ, ಜಾನುವಾರುಗಳು, ಎತ್ತಿನಗಾಡಿಗಳೊಂದಿಗೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ ಇತರರು ಭಾಗವಹಿಸುವರು ಎಂದರು.

ಮಂಡಲದ ರೈತ ಮೋರ್ಚಾ ಅಧ್ಯಕ್ಷ ಮನೋಹರ್ ವಡ್ಡಿನಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಪರಮೇಶಣ್ಣ ಹಲಗೇರಿ, ಪ್ರಕಾಶಗೌಡ ಗೌಡರ್, ರವಿಶಂಕರ್ ಬಾಳಿಕಾಯಿ, ಗುರುಶಾಂತ್ ಎತ್ತಿನಹಳ್ಳಿ, ಚನ್ನಬಸಪ್ಪ ಮಾಳಗಿ, ಶಿವಶಂಕರ ಕುಸುಗೂರು, ಹುಚ್ಚನಗೌಡ ಕಬ್ಬಕ್ಕಿ, ಹೂವನಗೌಡ ಮಳವಳ್ಳಿ, ನಿಂಗಪ್ಪ ದಂಡಿಗಿಹಳ್ಳಿ, ರಾಘಣ್ಣ ಹರವಿಶೆಟ್ಟರ್, ಪ್ರಕಾಶಗೌಡ ಹರಳಳ್ಳಿ, ಬಸವರಾಜ ಚಿಂದಿ, ರಾಮನಗೌಡ ಶಿರಗಂಬಿ, ಮಹೇಶ್ ಆಗಸನಹಳ್ಳಿ ಇತರರು ಇದ್ದರು.