ಹೊನ್ನಾಳಿ: ರಾಜ್ಯ ಸರ್ಕಾರದ ವೈಫಲ್ಯಗಳ ಖಂಡಿಸಿ ಹೊನ್ನಾಳಿ- ನ್ಯಾಮತಿ ತಾಲೂಕು ಬಿಜೆಪಿ ಘಟಕದಿಂದ ಸೆ. 9ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳೆಯಿಂದ ಬೆಳೆಗಳು ಹಾನಿಯಾಗಿ ರೈತರಿಗೆ ನಷ್ಟ ಉಂಟಾಗಿದ್ದು, ಸರ್ಕಾರ ಈವರೆಗೂ ಪರಿಹಾರ ನೀಡಿಲ್ಲ. ಕೃಷಿ ಪಂಪ್‌ಸೆಟ್‌ಗೆ ಆಧಾರ್ ಜೋಡಣೆ ಮಾಡಿಸಿ ವಿದ್ಯುತ್ ಬಾಕಿ ವಸೂಲಿ ಮಾಡಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ನಡೆಸುತ್ತಿದ್ದಾಗ ಮನೆಗಳು ಬಿದ್ದರೆ ಅವರಿಗೆ ಮೊದಲು ಆಹಾರ, ಪಾತ್ರೆ, ಪಗಡೆ ಕೊಳ್ಳಲು 10 ಸಾವಿರ ರೂ. ನೀಡಿ, ನಂತರ 90 ಸಾವಿರದಿಂದ 5 ಲಕ್ಷದವರೆಗೆ ಪರಿಹಾರ ನೀಡಿತ್ತು. ಈ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಎಲ್ಲ ಜನಪ್ರಿಯ ಯೋಜನೆ ರದ್ದು ಮಾಡಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕುಂಠಿತಗೊಂಡಿದೆ. ಇದನ್ನು ಖಂಡಿಸಿ ಸೋಮವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ನಡೆಸಲಾಗುವುದು. ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ, ನಂತರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಸುರೇಂದ್ರನಾಯ್ಕ, ಮಾರುತಿನಾಯ್ಕ, ಅರಕೆರೆ ನಾಗರಾಜ್, ಸಿ.ಆರ್. ಶಿವಾನಂದ್ ಇತರರು ಇದ್ದರು.