ಜಿಲ್ಲೆ

ನೀರಸ ಪ್ರತಿಕ್ರಿಯೆ ನಡುವೆ ಪ್ರತಿಭಟನೆ, ರಸ್ತೆಗಿಳಿದ ಸಂಘಟನೆಗಳು, ಚಪ್ಪಲಿಯಲ್ಲಿ ಹೊಡೆದುಕೊಂಡ ಅನ್ನದಾತರು

Bengaluru Rural

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನಾಲ್ಕು ತಾಲೂಕು ಕೇಂದ್ರಗಳಲ್ಲಿ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ, ಸರ್ಕಾರಗಳ ವಿರುದ್ಧ ೋಷಣೆ ಕಂಡುಬಂತು. ಏತನ್ಮಧ್ಯೆ ದೊಡ್ಡಬಳ್ಳಾಪುರದಲ್ಲಿ ರೈತರು ಚಪ್ಪಲಿಯಿಂದ ಸ್ವಯಂ ಹೊಡೆದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಖುದ್ದು ಖಾಕಿ ಪಡೆಯೊಂದಿಗೆ ಗಸ್ತು ತಿರುಗಿ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಿದರು.

ನೆಲಮಂಗಲದಲ್ಲಿ ಪ್ರತಿಭಟನಾ ಮೆರವಣಿಗೆ: ನೆಲಮಂಗಲ ನಗರದ ಕುಣಿಗಲ್ ವೃತ್ತದ ಬಳಿ ಸಮಾವೇಶಗೊಂಡ ಕರವೇ (ಪ್ರವೀಣಕುಮಾರ್‌ಶೆಟ್ಟಿ ಬಣ) ಕಾರ್ಯಕರ್ತರು ಕುಣಿಗಲ್ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ ಬಳಿಕ ತಹಸೀಲ್ದಾರ್ ಎಂ.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ಸಿಐಟಿಯು ತಾಲೂಕು ಸಮಿತಿ ಹಾಗೂ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಬಂದ್‌ಗೆ ಬೆಂಬಲ ನೀಡಿದರು.

ಅತ್ತಿಬೆಲೆಯಲ್ಲಿ ಪ್ರತಿಭಟನಾಕಾರರ ಬಂಧನ: ಕರ್ನಾಟಕ-ತಮಿಳುನಾಡು ಗಡಿಭಾಗ ಆನೇಕಲ್‌ನಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಎಸ್‌ಆರ್‌ಟಿಸಿ ಘಟಕದ ಎದುರು ಸಿಐಟಿಯು ಹಾಗೂ ದಲಿತ ಸಂಘಟನೆ ಕಾರ್ಯಕರ್ತರು ಡಿಪೋದಿಂದ ಹೊರಬರುವ ಬಸ್‌ಗಳನ್ನು ತಡೆದು ಪ್ರತಿಭಟಿಸಿದರು. ಕನ್ನಡ ಪರ ಸಂಘಟನೆಗಳು ಗಡಿಭಾಗ ಅತ್ತಿಬೆಲೆಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸುತ್ತಿದ್ದ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಮುಖಂಡ ನವೀನ್ ಕುಮಾರ್ ಹಾಗೂ ಕಾರ್ಯಕರ್ತರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವ ಸರ್ಜಾಪುರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಹೊಸಕೋಟೆಯಲ್ಲಿ ಸರ್ಕಾರದ ವಿರುದ್ಧ ೋಷಣೆ: ಹೊಸಕೋಟೆಯ ಪ್ರಮುಖ ರಸ್ತೆಗಳಲ್ಲಿ ಸಿಐಟಿಯು, ರೈತ ಸಂಘಟನೆ ಹಾಗೂ ದಲಿತಪರ ಸಂಘಟನೆಗಳಿಂದ ಸರ್ಕಾರಗಳ ವಿರುದ್ಧ ೋಷಣೆ ಮೊಳಗಿಸಲಾಯಿತು. ವಿದೇಶಿ ಕಂಪನಿಗಳಿಗೆ ಭೂಮಿ ನೀಡಲು ರೈತರ ಜಮೀನು ಕಬಳಿಸುವ ಹುನ್ನಾರ ನಡೆದಿದೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷ ಹರೀಂದ್ರ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಒಳಿತಿಗಾಗಿ ಸ್ವಾಮಿನಾಥನ್ ಸಮಿತಿ ವರದಿ ನೀಡಿದರೆ ಅದನ್ನು ಮೂಲೆಗೆ ಎಸೆದಿರುವ ಸರ್ಕಾರ, ಯಾವ ಆಧಾರದಲ್ಲಿ ಭೂ ಸುಧಾರಣಾ ತಿದ್ದು ಕಾಯ್ದೆ ಜಾರಿಮಾಡಲು ಮುಂದಾಗಿದೆ ಎಂದು ರೈತಸಂಘದ ಉಪಾಧ್ಯಕ್ಷ ಕೆಂಚೇಗೌಡ ಪ್ರಶ್ನಿಸಿದರು.

ನಂದಗುಡಿಯಲ್ಲಿ ರಸ್ತೆಗಿಳಿದ ರೈತರು: ನಂದಗುಡಿ ಹೋಬಳಿಯಲ್ಲಿ ರೈತ ಸಂಘ ಹಾಗೂ ದಲಿತ ಸಂಘಟನೆ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಗಾಂಧಿ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ಆಕ್ರೋಶ ಹೊರಹಾಕಿದರು. ರೈತರ ಜೀವನಾಧಾರವಾಗಿರುವ ಭೂಮಿಯನ್ನು ಕೃಷಿಕರಲ್ಲದವರಿಗೆ ವರ್ಗಾಯಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿರುವ ಭೂ ಸುಧಾರಣಾ ತಿದ್ದುಪಡಿ ಕೈಬಿಡಬೇಕು ಎಂದು ಸಮತಾ ಸೈನಿಕದಳದ ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಮುನಿರಾಜು ಒತ್ತಾಯಿಸಿದರು.

ಚಪ್ಪಲಿಯಲ್ಲಿ ಹೊಡೆದುಕೊಂಡ ರೈತರು: ಸರ್ಕಾರದ ನಡೆ ವಿರೋಧಿಸಿ ರೈತಸಂಘದ ಮುಖಂಡರು ದೊಡ್ಡಬಳ್ಳಾಪುರದಲ್ಲಿ ಸ್ವಯಂ ಚಪ್ಪಲಿಯಿಂದ ಹೊಡೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ವಸಂತ್ ಮಾತನಾಡಿ, ಸರ್ಕಾರಗಳು ರೈತವಿರೋಧಿ ಕಾನೂನು ಜಾರಿಗೆ ತರುತ್ತಿವೆ. ಪ್ರತಿ ಪಕ್ಷಗಳು ಸುಮ್ಮನೆ ಕುಳಿತುಕೊಂಡಿವೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ವಿಷ ಕುಡಿಯಬೇಕಾದ ಸ್ಥಿತಿ ಎದುರಾಗಬಹುದು ಎಂದರು.

ರೈತಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ಜಿಲ್ಲೆಯಲ್ಲಿ ಭೂಮಿ ಬೆಲೆ ಹೆಚ್ಚಾದ ಹಿನ್ನೆಲೆ ಸರ್ಕಾರಿ ಗುಂಡುತೋಪು, ಗೋಮಾಳ ಜಾಗವನ್ನು ಹರಾಜಿಗೆ ಹಾಕಿ, ಬರುವ ಆದಾಯದಲ್ಲಿ ಸಿಬ್ಬಂದಿಗೆ ವೇತನ ನೀಡುವ ದುಸ್ಥಿತಿಗೆ ಸರ್ಕಾರ ಬಂದಿರುವುದು ದುರಂತ ಎಂದರು.

ಶಾಸಕ ವೆಂಕಟರಮಣಯ್ಯ ಮಾತನಾಡಿ, ರೈತರನ್ನು ಕಾರ್ಪೋರೇಟ್ ಕಂಪನಿಗಳಿಗೆ ಪರೋಕ್ಷವಾಗಿ ಮಾರಾಟ ಮಾಡಿ ದೇಶದಲ್ಲಿ ಮತ್ತೊಮ್ಮೆ ಜಮೀನ್ದಾರಿ ಪದ್ಧತಿ ಜಾರಿ ತರಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ಬಂದ್‌ಗೆ ಮನವಿ: ಕಾಯ್ದೆ ತಿದ್ದುಪಡಿಯಿಂದ ಹಿಂದೆ ಸರಿಯದಿದ್ದರೆ ರೈತರ ಹೋರಾಟಗಳು ಉಗ್ರರೂಪ ಪಡೆಯಲಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಟೌನ್ ಅಧ್ಯಕ್ಷ ಮಂಡಿಬೆಲೆ ನಾರಾಯಣಸ್ವಾಮಿ ಎಚ್ಚರಿಸಿದರು.

ವಿಜಯಪುರದ ಅಂಕತಟ್ಟಿ ನಂಜುಂಡಪ್ಪ ಸರ್ಕಲ್ ಬಳಿ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಬಣಗಳು ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಅಂಗಡಿ ಮುಂಗಟ್ಟು ಮುಚ್ಚಲು ವ್ಯಾಪಾರಸ್ಥರಿಗೆ ಮನವಿ ಮಾಡಲಾಯಿತು.

ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯದರ್ಶಿ ಪುರ ಕೃಷ್ಣ, ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಮಹೇಶ್, ಕರವೇ ಶಿವರಾಮೇಗೌಡ ಬಣದ ಅಧ್ಯಕ್ಷ ಅಣ್ಣಮ್ಮತಾಯಿ ಸುರೇಶ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಚಾಲಕ ನಟರಾಜು, ಉಪಾಧ್ಯಕ್ಷ ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಸಂದೇನಹಳ್ಳಿ ಗೋವಿಂದರಾಜು, ಕೇಶವಮೂರ್ತಿ, ಬೈರಾಪುರ ಗೋವಿಂದರಾಜು, ಪುರ ಮುನೇಗೌಡ, ದಲಿತ ಸೇವಾ ಸಂಘದ ವೇಣು ಹಾಜರಿದ್ದರು.

ಪ್ರಗತಿಪರ ಸಂಘಟನೆಗಳಿಂದ ರ‌್ಯಾಲಿ: ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ವಿವಿಧ ಪ್ರಗತಿಪರ, ರೈತಪರ, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೇರಿ ಹಲವರು ಹಳೆಬಸ್ ನಿಲ್ದಾಣವೃತ್ತ, ಬಜಾರ್ ರಸ್ತೆ, ಗಾಂಧಿಚೌಕ ಮತ್ತಿತರ ಕಡೆ ಧರಣಿ ನಡೆಸಿ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಶ್ರೀಮಂತರ ಪರವಾಗಿ ಕಾನೂನು ಜಾರಿಗೆ ತಂದಿದ್ದು, ರೈತ ವಿರೋಧಿ ನೀತಿ ಅನುಸರಿಸುತ್ತಿದೆ, ಬಿಜೆಪಿ ಸರ್ಕಾರಕ್ಕೆ ಮುಂಬರುವ ಗ್ರಾಮಪಂಚಾಯತಿ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ವರದಾನ

*ಎಂಎಲ್‌ಸಿ ಎಂಟಿಬಿ ನಾಗರಾಜ್ ಸ್ಪಷ್ಟನೆ*ಎ.ರಂಗನಾಥಪುರದಲ್ಲಿ ಪ್ರತಿಭಾ ಪುರಸ್ಕಾರ

ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಹಣ ವಸೂಲಿ ಮತ್ತಿತರ ಅಕ್ರಮಗಳಿಗೆ ಕಡಿವಾಣ ಬೀಳಲಿದೆ, ರೈತರಿಗೆ ವರದಾನವಾಗಲಿರುವ ಈ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.

ದೇವನಹಳ್ಳಿ ತಾಲೂಕು ಎ.ರಂಗನಾಥಪುರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಪದಾಧಿಕಾರಿಗಳ ಸಮಾವೇಶ, ಪ್ರತಿಭಾ ಪುರಸ್ಕಾರ, ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಪಿಎಂಸಿ ಕಾಯ್ದೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಸಮಸ್ಯೆಯಾಗುವುದಿಲ್ಲ. ಈ ತಿದ್ದುಪಡಿಯಿಂದ ಯಾರೂ ಬೇಕಾದರೂ ಕೃಷಿ ಮಾಡಬಹುದು, ಹಾಗೆಯೇ ಕೈಗಾರಿಕೆ ಅಗತ್ಯವೂ ಇದೆ, ಕೃಷಿ ಇಲ್ಲದ ಭೂಮಿಯಲ್ಲಿ ಕೈಗಾರಿಕೋದ್ಯಮ ಬೆಳೆದರೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿರುವ ಸರ್ಕಾರಕ್ಕೆ ಈ ಕಾಯ್ದೆ ತಿದ್ದುಪಡಿ ಸಹಕಾರಿಯಾಗಲಿದೆ, ಕೈಗಾರಿಕೋದ್ಯಮಿಗಳು ತಾವು ಖರೀದಿಸಿದ ಜಮೀನಿನಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಆ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ, ಉದ್ಯೋಗ ಹೆಚ್ಚುವುದರಿಂದ ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದರು. ಈ ಬಗ್ಗೆ ವಿರೋಧ ಮಾಡುವವರು ಅವಲೋಕಿಸಬೇಕು, ರೈತರು ಅವಶ್ಯಕತೆ ಇದ್ದರಷ್ಟೆ ಜಮೀನು ಮಾರಾಟ ಮಾಡಬಹುದೇ ಹೊರತು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಂಡು ಉದ್ದಿಮೆದಾರರಿಗೆ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುವುದು ತಪ್ಪುತ್ತದೆ, ಈ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ವರದಾನವಾಗಲಿದೆ ಎಂದರು.

ಸ್ವಾಂತಂತ್ರ್ಯ ಬಂದು 70 ವರ್ಷ ಕಳೆದರೂ ದೇವನಹಳ್ಳಿ ತಾಲೂಕು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ, ಮುಂದಿನ ಗ್ರಾಪಂ ಚುನಾವಣೆಯಲ್ಲಿ ಯಾರೂ ಪ್ರಾಮಾಣಿಕವಾಗಿ ಜನಸೇವೆ ಮಾಡುವರೋ ಅಂಥವರನ್ನು ಆಯ್ಕೆ ಮಾಡಬೇಕು ಎಂದರು.

ಎಂ.ಟಿ.ಬಿ.ನಾಗರಾಜು ಅವರಿಗೆ ಸಚಿವಸ್ಥಾನ ಸಿಕ್ಕು ಜಿಲ್ಲಾ ಉಸ್ತುವಾರಿ ಸಚಿವರಾದರೆ ದೇವನಹಳ್ಳಿ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದಾರೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಸಂಘಟಿಸಿ ಅಧಿಕಾರ ಹಿಡಿಯಲು ಸಹಾಯವಾಗುತ್ತದೆ ಎಂದು ರಾಜ್ಯ ರೈತಮೋರ್ಚಾ ಮಾಜಿ ಉಪಾಧ್ಯಕ್ಷ ಎಂ.ನಾರಾಯಣಗೌಡ ಹೇಳಿದರು.

ಮಾಜಿ ಶಾಸಕ ಜಿ.ಚಂದ್ರಣ್ಣ ಚಂದ್ರಪ್ಪ, ಜಿಲ್ಲಾ ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ರವಿಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಸುನಿಲ್ ಸುಂದರೇಶ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ನೀಲೇರಿ ಮಂಜುನಾಥ್, ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮೋಹನ್, ಬಿಜೆಪಿ ಒಬಿಸಿ ತಾಲೂಕು ಅಧ್ಯಕ್ಷ ಸುಜಿತ್ ಮತ್ತಿತರರು ಇದ್ದರು.

ಪ್ರವಾಸಿಗರಿಗೆ ಗುಲಾಬಿ ಸ್ವಾಗತ

*ಜಿಲ್ಲೆಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ*ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಬೆಂ. ಗ್ರಾಮಾಂತರ

ಕರೊನಾ ಲಾಕ್‌ಡೌನ್ ಸಡಿಲಿಕೆ ಬಳಿಕ ಗ್ರಾಮಾಂತರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿದ್ದು, ಪ್ರೇಕ್ಷಣಿಯ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇದರ ನಡುವೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗಿದೆ.

ಜಿಲ್ಲೆಯ ಪ್ರಮುಖ ನಾಲ್ಕು ಪ್ರವಾಸಿ ತಾಣಗಳಲ್ಲಿ ಇಲಾಖೆ ಶ್ರಮದಾನದ ಮೂಲಕ ಸ್ವಚ್ಛತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಘಾಟಿಸುಬ್ರಹ್ಮಣ್ಯ, ದೇವನಹಳ್ಳಿ ಕೋಟೆ, ಮಧುರೆ ದೇವಸ್ಥಾನ ಹಾಗೂ ಶಿವಗಂಗೆ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಸಿಬ್ಬಂದಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಸೆಳೆಯುವ ಜತೆಗೆ ಕರೊನಾ ಮುಂಜಾಗ್ರತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು. ಪರಸ್ಪರ ಅಂತರ ಕಾಯ್ದುಕೊಳ್ಳಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಾಗೂ ಅಗತ್ಯವಿದ್ದ ವೇಳೆ ಸ್ಯಾನಿಟೈಸರ್ ಬಳಸುವಂತೆ ಬ್ಯಾನರ್‌ಗಳ ಮೂಲಕ ಅರಿವು ಮೂಡಿಸಲಾಯಿತು.

ದೇಗುಲ ಸಿಬ್ಬಂದಿ ಭಾಗಿ:

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೇವಸ್ಥಾನದ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ಸಹಯೋದಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರದ ಸ್ಥಳೀಯರನ್ನು ಒಳಗೊಂಡಂತೆ ಪ್ರವಾಸಿಗರಿಗೆ ಸ್ವಚ್ಛತೆ ಅರಿವು ಮೂಡಿಸಲಾಯಿತು.

ಗುಲಾಬಿ ಸ್ವಾಗತ:

ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವಿದೇಶಿಯರಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸುವ ಪರಿವಾಠ ಇಟ್ಟುಕೊಂಡಿರುವ ಪ್ರವಾಸೋದ್ಯಮ ಇಲಾಖೆ ಈ ಬಾರಿ ಸ್ಥಳೀಯ ಪ್ರವಾಸಿಗರಿಗೂ ಗುಲಾಬಿ ಹೂವು ನೀಡಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ವಿದೇಶಿಯರ ಭೇಟಿ ನಿಂತು ಹೋಗಿದೆ. ಸ್ಥಳೀಯವಾಗಿಯೇ ಪ್ರವಾಸಿಗರನ್ನು ಸೆಳೆಯಲು ಇಲಾಖೆ ಸಾಕಷ್ಟು ಕಸರತ್ತು ನಡೆಸುತ್ತಿದೆ.

ಕೋಟ್()

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಚೇತರಿಕೆ ಹಾದಿಯತ್ತ ಸಾಗಿವೆ, ಈಗಾಗಲೇ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದ ಚಿಂತನೆ ಇದೆ. ಮತ್ತಷ್ಟು ಕಾರ್ಯಕ್ರಮಗಳು ಶೀಘ್ರವೇ ಜಾರಿಯಾಗಲಿವೆ.

ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರೇಕ್ಷಣಿಯ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಪ್ರವಾಸಿಗರು ಸುರಕ್ಷಿತವಾಗಿ ಪ್ರವಾಸ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಮುಖ್ಯವಾಗಿ ಕರೊನಾ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು.

ಮಂಗಳಗೌರಿ, ಸಹಾಯಕ ನಿರ್ದೇಶಕಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ