ಜಿಲ್ಲೆ

ಮೈಸೂರಿನಲ್ಲಿ ವಕ್ಫ್ ಮಂಡಳಿ ವಿರುದ್ಧ ಪ್ರತಿಭಟನೆ

ಅವಿನಾಶ್ ಜೈನಹಳ್ಳಿ

ಶತಮಾನಗಳ ಇತಿಹಾಸವಿರುವ ಮೈಸೂರಿನ ಹೃದಯ ಭಾಗದಲ್ಲಿರುವ ವಿನೋಬಾ ರಸ್ತೆಯ ಎಂ.ಕೆ.ಹಾಸ್ಟೆಲ್ ಜಾಗಕ್ಕೆ ವಕ್ಫ್ ಮಂಡಳಿ ನೋಟಿಸ್ ನೀಡಿದೆ.

ಸದರಿ ಖಾಲಿ ಜಾಗ ವಕ್ಫ್‌ಗೆ ಸೇರಿದ ಆಸ್ತಿ ಎಂದು ನೋಟೀಸ್ ಜಾರಿ ಮಾಡಲಾಗಿದ್ದು, ಮೇ 9ರ ಒಳಗೆ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಪೂರ್ವ-ಪಶ್ಚಿಮ 54 ಅಡಿ, ಉತ್ತರ-ದಕ್ಷಿಣ 100 ಅಡಿ ಸೇರಿದಂತೆ ಒಟ್ಟು 3,268 ಚದರ ಅಡಿ ನಮ್ಮ ಸಂಸ್ಥೆಗೆ ಸೇರಿದ್ದು ಎಂದು ಎಂ.ಕೆ.ಹಾಸ್ಟೆಲ್ ವಿಳಾಸಕ್ಕೆ ನೋಟಿಸ್ ಅಂಟಿಸಲಾಗಿದೆ.

ಪ್ರತಾಪ್ ಸಿಂಹ ನೇತೃತ್ವದಲ್ಲಿ ಪ್ರತಿಭಟನೆ: ವಕ್ಫ್ ಮಂಡಳಿ ನೋಟಿಸ್ ನೀಡಿರುವುದನ್ನು ಖಂಡಿಸಿ ಮಾಜಿ ಸಂಸದ ಪ್ರತಾಪಸಿಂಹ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಶಿವರಾಂಪೇಟೆಯ ವಿನೋಬಾ ರಸ್ತೆಯಲ್ಲಿರುವ ಎಂ.ಕೆ. ಹಾಸ್ಟೆಲ್ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ವಕ್ಫ್ ಮಂಡಳಿ ವಿರುದ್ಧ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಮಾಜಿ ಸಂಸದ ಪ್ರತಾಪಸಿಂಹ ಮಾತನಾಡಿ, 109 ವರ್ಷಗಳ ಇತಿಹಾಸವಿರುವ ಎಂ.ಕೆ. ಹಾಸ್ಟೆಲ್ ಗೋಡೆ ಮೇಲೆ ಏಕಾಏಕಿ ವಕ್ಫ್ ಮಂಡಳಿ ನೋಟಿಸ್ ಅಂಟಿಸಿ, ನಮಗೆ ಸೇರಿದ್ದು ಎಂದು ಹೇಳಿದೆ. ಮೈಸೂರಿನಲ್ಲಿ ಮಹಾರಾಜರ ಹಿನ್ನೆಲೆ ಇದೆಯೇ ಹೊರತು ಹೈದರಾಲಿ, ಟಿಪ್ಪು ಸುಲ್ತಾನ್ ಇತಿಹಾಸವಿಲ್ಲ. 2013ರ ವಕ್ಫ್ ಕಾಯ್ದೆ ತಿದ್ದುಪಡಿಯಲ್ಲಿ ಖಾಸಗಿ ಜಮೀನು, ಸರ್ಕಾರಿ ಜಮೀನು ಅಥವಾ ಯಾರದ್ದೇ ಜಮೀನು ಆದರೂ ಕಬಳಿಸಲು ಅವಕಾಶ ನೀಡಲಾಗಿತ್ತು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ತಿದ್ದುಪಡಿ ಮಾಡಲಾಗಿತ್ತು. ಅದಕ್ಕೆ ಈಗ ಪ್ರಧಾನಿ ಮೋದಿ ಹೊಸ ವಕ್ಫ್ ತಿದ್ದುಪಡಿ ಕಾನೂನು ತಂದಿದ್ದಾರೆ. ಖಾಸಗಿ ಆಸ್ತಿಯನ್ನು ಕಬಳಿಸಲು ವಕ್ಫ್ ಮಂಡಳಿ ಮುಂದಾಗಿದೆ, ಇದಕ್ಕೆ ಖಂಡಿತ ನಾವು ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು.

ಡಿ.ದೇವರಾಜ ಅರಸು ಉಳುವವನೇ ಭೂಮಿಯ ಒಡೆಯ ಎಂದು ಹೇಳಿದ್ದರು. ಅದು ಈಗ ಏಕೆ ಅನ್ವಯವಾಗುವುದಿಲ್ಲ? ವಕ್ಫ್ ನವರು ಹಾಸ್ಟೆಲ್ ಮಾಲೀಕ ಮನ್ನಾರ್ ಕೃಷ್ಣಶೆಟ್ಟಿ ಅವರ ಕುಟುಂಬಕ್ಕೆ ಸೇರಿದ್ದಾರಾ? ಸಿದ್ದರಾಮಯ್ಯ ಕರ್ನಾಟಕವನ್ನು ತಾಲಿಬಾನ್ ಮಾಡಲು ಹೊರಟಿದ್ದಾರೆಯೇ? ಈ ನೋಟಿಸ್ ಅನ್ನು ಇಲ್ಲೇ ಹರಿದು ಬಿಸಾಕುತ್ತೇವೆ. ಜಿಲ್ಲಾಧಿಕಾರಿಗಳು ಕಣ್ಮುಚ್ಚಿ ಕೂರಬಾರದು. ಇದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಂ.ಕೆ. ಹಾಸ್ಟೆಲ್ ಮಾಲೀಕ ಸಿ.ವಿ.ರಾಮಚಂದ್ರ ಶೆಟ್ಟಿ ಮಾತನಾಡಿ, ನಮ್ಮ ಜಾಗದ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಅವರ ಬಳಿ ಏನು ದಾಖಲೆಗಳಿವೆಯೋ ಅದನ್ನು ತೋರಿಸಲಿ. ನಾವು ಕೋರ್ಟ್ ಮೂಲಕ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಇತ್ತೀಚೆಗೆ ವಕ್ಫ್ ಮಂಡಳಿ ಸಾರ್ವಜನಿಕ ಸ್ಥಳಗಳನ್ನು ಮತ್ತು ಖಾಸಗಿ ಆಸ್ತಿಗಳನ್ನು ಕಬಳಿಸಲು ಪ್ರಯತ್ನಿಸುತ್ತಿದೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ವಕ್ಫ್ ಮಂಡಳಿಗೆ ಬಿಟ್ಟುಕೊಡುವುದಿಲ್ಲ. ಅದು ನಮ್ಮ ಆಸ್ತಿ ಎಂದು ಒಂದೇ ಒಂದು ದಾಖಲೆ ಇದ್ದರೆ ತೋರಿಸಲಿ. ನಾವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಎಲ್.ನಾಗೇಂದ್ರ, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್‌ಗೌಡ, ಪ್ರಮೀಳಾಭರತ್, ಮುಖಂಡರಾದ ನಾರಾಯಣಗೌಡ, ಮೈ.ಕಾ.ಪ್ರೇಮ್‌ಕುಮಾರ್, ತೇಜೇಶ್ ಲೋಕೇಶ್‌ಗೌಡ ಸೇರಿದಂತೆ ಇತರರಿದ್ದರು.