ಉಡುಪಿ: ಶಾಂತಿ ದೌರ್ಬಲ್ಯವಾಗಬಾರದು. ಶಾಂತಿಗಾಗಿ ಸಂರ್ಷ ಗೀತೆ ಸಂದೇಶ. ಬಾಂಗ್ಲಾ ದೇಶದಲ್ಲಿ ಹಿಂದುಗಳ ವಿರುದ್ಧ ನಡೆಯುತ್ತಿರುವ ಆಕ್ರಮಣ ಒಕ್ಕೊರಲಿನಿಂದ ಖಂಡಿಸಬೇಕು. ಹಿಂದುಗಳಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದು, ಅನ್ಯಾಯದ ವಿರುದ್ಧ ಹೋರಾಟದ ಸಂಕಲ್ಪ ಮಾಡಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂಧ್ರತಿರ್ಥ ಸ್ವಾಮೀಜಿ ಹೇಳಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕೊಲೆ, ಅತ್ಯಾಚಾರ ಹಾಗೂ ಹಿಂದೂ ಮುಖಂಡ ಚಿನ್ಮಯಕೃಷ್ಣದಾಸ್ ಬಂಧನ ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಬಹುಮುಖ ಆಕ್ರಮಣ
ಭಾರತದಲ್ಲೂ ಹಿಂದುಗಳ ಮೇಲೆ ಬಹುಮುಖ ಆಕ್ರಮಣ ನಡೆಯುತ್ತಿದೆ. ದಿಢೀರ್ ಪಹಣಿಯಲ್ಲಿ ವಕ್ಪ ಹೆಸರು ದಾಖಲಾಗುತ್ತಿದ್ದು, ಹಿಂದುಗಳ ಆಸ್ತಿಪಾಸ್ತಿ ಅಪಹರಿಸುವ ಕುತಂತ್ರ ನಡೆಯುತ್ತಿದೆ. ಹಕ್ಕುಪತ್ರಗಳಲ್ಲಿ ಆಸ್ತಿಯ ಭದ್ರತೆಯೇ ಇಲ್ಲದಂತಾಗಿದೆ. ಈ ಅಪಾಯಕಾರಿ ಪ್ರವೃತ್ತಿಯ ವಿರುದ್ಧ ಧ್ವನಿಎತ್ತಬೇಕು. ಸಂತ್ರಸ್ತರಿಗೆ ಪರಿಹಾರ ನೀಡುವುದು, ಮರು ಬದಲಾವಣೆ ಮಾಡುವುದು ಮುಖ್ಯವಲ್ಲ. ಮೊದಲಾಗಿ ಈ ಕುತಂತ್ರಕ್ಕೆ ಕುಮ್ಕಕು ನೀಡುತ್ತಿರುವವರನ್ನು ಪತ್ತೆ ಹಚ್ಚಬೇಕು.
ಸಂಖ್ಯೆಯಲ್ಲ ಸಂಟನೆಯಲ್ಲಿ ಬಲ
ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಜಂಗಲ್ ರಾಜ್ ಸರಕಾರ ಅಸ್ತಿತ್ವದಲ್ಲಿದೆ. ಅಂತಾರಾಷ್ಟ್ರೀಯ ಸಂಘಟನೆಗಳ ಮೂಲಕ ಒತ್ತಡವನ್ನು ಹೇರಬೇಕು. ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ರಕ್ಷಣೆ ಸಿಗುವವರೆಗೆ ಆ ದೇಶದ ಜೊತೆಗೆ ಯಾವುದೇ ರೀತಿಯ ವ್ಯಾಪಾರ, ಕ್ರಿಕೆಟ್ ಪಂದ್ಯಾಟ ನಡೆಸಬಾರದು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ದಯನೀಯ ಪರಿಸ್ಥಿತಿ ಗಮನಿಸುತ್ತಿದ್ದೇವೆ. ಮುಂದೆ ಭಾರತದಲ್ಲಿಯೂ ಈ ಸ್ಥಿತಿ ಬಾರದಂತೆ ತಡೆಯಲು ಹಿಂದೂಗಳು ಎಚ್ಚೆತ್ತುಕೊಳ್ಳಬೇಕಿದೆ. ಸಂಖ್ಯೆ ಮುಖ್ಯವಲ್ಲ. ಸಂಟನೆಯಲ್ಲಿ ಬಲವಿದೆ ಎಂದರು.
ಪೋಸ್ಟ್ ಕಾರ್ಡ್ ಚಳುವಳಿ ನಡೆಸಿ
ಪ್ರತಿಯೊಬ್ಬ ಹಿಂದೂ ಬಾಂಗ್ಲಾದೇಶದಲ್ಲಿನ ಹಿಂದೂವನ್ನು ರಕ್ಷಿಸುವಂತೆ ಆಗ್ರಹಿಸಿ, ಪೋಸ್ಟ್ ಕಾರ್ಡ್ ಬರೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಸಾಮಾಜಿಕ ಜಾಲತಾಣವನ್ನು ಪ್ರಬಲವಾಗಿ ಬಳಸಿ ಸೇವ್ ಬಾಂಗ್ಲಾ ಹಿಂದೂ ಎಂಬ ಅಭಿಯಾನ ಆರಂಭಿಸಬೇಕು ಎಂದು ಕರೆ ನೀಡಿದರು.
ಸಾಮರಸ್ಯ ವೇದಿಕೆಯ ಮಂಗಳೂರು ವಿಭಾಗದ ಸಂಚಾಲಕ ರವೀಂದ್ರ ಪುತ್ತೂರು ದಿಕ್ಸೂಚಿ ಭಾಷಣ ಮಾಡಿದರು. ಮಾತ ಅಮೃತನಂದಮಯಿ ಟ್ರಸ್ಟ್ ನ ಕಲ್ಪನಾ ಭಾಸ್ಕರ್ ಸಂದೇಶ ವಾಚಿಸಿದರು. ಬಿಜೆಪಿ ಯುವ ಮುಖಂಡ ಶ್ರೀನಿಧಿ ಹೆಗ್ಡೆ ರಾಷ್ಟ್ರಪತಿಗೆ ಕಳುಹಿಸುವ ಆಗ್ರಹ ಪತ್ರವನ್ನು ಓದಿದರು. ವೇದಿಕೆಯಲ್ಲಿ ಇಸ್ಕಾನ್ ಸಂಸ್ಥೆಯ ಗೋವಿಂದ್ ದಾಸ್, ಹಿರಿಯ ಗುರುಸ್ವಾಮಿ ಗೋಪಾಲ್ ಉಪಸ್ಥಿತರಿದ್ದರು. ಪ್ರಸಾದ್ ಶೆಟ್ಟಿ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು.
ಜನಾಂದೋಲನ ಜಾಥ
ಸಭೆಯ ಆರಂಭಕ್ಕೂ ಜೋಡುಕಟ್ಟೆಯಿಂದ ರಾಜಾಂಗಣ ಪಾರ್ಕಿಂಗ್ ಪ್ರದೇಶವರೆಗೆ ನಡೆದ ಜನಾಂದೋಲನ ಜಾಥಕ್ಕೆ ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥರು ಚಾಲನೆ ನೀಡಿದರು. ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಸಂಘಟನೆಯ ಪ್ರಮುಖರಾದ ದಿನೇಶ್ ಮೆಂಡನ್ , ಸಮಿತಿಯ ಸಂಚಾಲಕ ರಾಧಾಕೃಷ್ಣ ಮೆಂಡನ್ ಮೊದಲಾದವರು ಭಾಗಿಯಾಗಿದ್ದರು.