ಹುಬ್ಬಳ್ಳಿ: ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘ ಸೇರಿ ವಿವಿಧ ಸಂಘಟನೆ ವತಿಯಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸನಾತನ ಧರ್ಮ ನಮ್ಮ ಜೀವನದ ಅವಿಭಾಜ್ಯ ಅಂಗ. ಜೀವನ ಪದ್ಧತಿ. ಅಂಥ ಪದ್ಧತಿಯನ್ನು ಒಪ್ಪುವ ಮನಸ್ಥಿತಿ ಸ್ಟಾಲಿನ್ಗೆ ಇಲ್ಲ. ಧರ್ಮದ ವಿರುದ್ಧ ಅವಹೇಳನವಾಗಿ ಮಾತನಾಡುವುದನ್ನು ಅವರು ರೂಢಿಸಿಕೊಂಡಿದ್ದಾರೆ. ಇಂಥವರಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿದೆ. ಕೂಡಲೇ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಮಿನಿವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಪ್ರಮುಖರಾದ ದಿನೇಶ ಶೆಣೈ, ಶ್ರೇಯಾ ಮಂಜ್ರೇಕರ್, ಅಶೋಕ ಹೆಗಡೆ, ಹನುಮಂತ ಡಂಬಳ, ಎ.ಸಿ. ಗೋಪಾಲ, ವಿಶ್ವಪ್ರಿಯ ಆಚಾರ್ಯ, ವಿಜಯ ನಾಡಜೋಶಿ, ವೀಣಾ ಹೆಗಡೆ, ಕಾವ್ಯ ಹೆಗಡೆ, ನಿವೇದಿತಾ ಭಟ್, ಉಮಾ ಶೆಟ್ಟಿ, ಅನಂತಪದ್ಮನಾಭ ಐತಾಳ, ದತ್ತಮೂರ್ತಿ ಕುಲಕರ್ಣಿ, ಮನೋಹರ ಪರ್ವತಿ ಇತರರು ಇದ್ದರು.