ಕುಮಟಾ: ತಾಲೂಕಿನ ಹೊಳೆಗದ್ದೆಯಲ್ಲಿ ಚತುಷ್ಪಥ ಟೋಲ್ನಲ್ಲಿ ಸ್ಥಳೀಯ ನೋಂದಣಿ ವಾಹನಗಳಿಗೆ ಶುಲ್ಕ ಆಕರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಕುಮಟಾ ಹಾಗೂ ಹೊನ್ನಾವರದ ಟ್ಯಾಕ್ಸಿ ಚಾಲಕ-ಮಾಲೀಕರ ಒಕ್ಕೂಟ, ಟಿಪ್ಪರ್ ಯೂನಿಯನ್ ಇನ್ನಿತರ ಸಂಘಟನೆಗಳು ಪಾಲ್ಗೊಂಡಿದ್ದವು. ಟೋಲ್ ಬಳಿ ಐಆರ್ಬಿ ಕಚೇರಿಯೆದುರು ಧರಣಿ ಕುಳಿತ ಪ್ರತಿಭಟನಾಕಾರರು ಚತುಷ್ಪಥ ಕಾಮಗಾರಿ ಪೂರ್ಣಗೊಳಿಸದೇ ಸ್ಥಳೀಯ ಕೆಎ-47 ನೋಂದಣಿ ವಾಹನಗಳಿಗೂ ದಬ್ಬಾಳಿಕೆಯಿಂದ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ಮೇಘರಾಜ ನಾಯ್ಕ ಸ್ಥಳಕ್ಕೆ ಬಂದು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರಾದರೂ ಶುಲ್ಕ ವಿನಾಯಿತಿ ಬಗ್ಗೆ ಅಧಿಕೃತ ಹೇಳಿಕೆ ನೀಡದೇ ಹೋದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಬೇಕಾಬಿಟ್ಟಿಯಾಗಿ ಸಾರ್ವಜನಿಕರಿಂದ ಟೋಲ್ ವಸೂಲಿ ಮೂಲಕ ಅಕ್ರಮ ಮತ್ತು ಅನ್ಯಾಯ ಎಸಗುತ್ತಿರುವ ಐಆರ್ಬಿ ಧೋರಣೆಗೆ ಸ್ಥಳೀಯ ಜನರ ಪರವಾಗಿ ನಿಲ್ಲಬೇಕಾದ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ನಾವು ಕೂಡ ಟೋಲ್ ಕಟ್ಟುವುದಿಲ್ಲ. ದಯವಿಟ್ಟು ಕೆಎ-47 ನೋಂದಣಿಯವರು ಯಾರೂ ಹೊಳೆಗದ್ದೆ ಟೋಲ್ ನಲ್ಲಿ ಶುಲ್ಕ ಕೊಡಬೇಡಿ, ಕೇಳಿದರೆ ನಮಗೆ ತಿಳಿಸಿ, ನಾವು ನಿಮ್ಮೊಂದಿಗಿದ್ದೇವೆ. ಸುಂಕ ಕಟ್ಟಿಲ್ಲವೆಂದು ನಿಮ್ಮಮೇಲೆ ದೌರ್ಜನ್ಯ ಮಾಡುವ ಹಕ್ಕು ಟೋಲ್ನವರಿಗೆ ಇಲ್ಲ ಎಂದರು.
ಸೂರಜ ನಾಯ್ಕ, ಕೃಷ್ಣಾನಂದ ವೆರ್ಣೆಕರ, ತಿಮ್ಮಪ್ಪ ನಾಯ್ಕ, ಕೃಷ್ಣ ಗೌಡ, ತುಕಾರಾಮ ನಾಯ್ಕ, ಅಶೋಕ ಗೌಡ, ಜಿ. ಎನ್. ಗೌಡ, ಜಿ.ಜಿ. ಶಂಕರ, ಡಿ.ಟಿ. ನಾಯ್ಕ, ಟ್ಯಾಕ್ಸಿ ಚಾಲಕ-ಮಾಲೀಕರ ಒಕ್ಕೂಟ, ಟಿಪ್ಪರ್ ಯೂನಿಯನ್ ಇನ್ನಿತರರು ಇದ್ದರು. ಟೋಲ್ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್್ತ ಮಾಡಲಾಗಿತ್ತು.