ಮೈಸೂರು: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ಮಹಿಳಾ ದೌರ್ಜನ್ಯವಿರೋಧಿ ಒಕ್ಕೂಟದಿಂದ ಶನಿವಾರ ನಗರದ ಪುರಭವನ ಆವರಣದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು.
ನಟ ಪ್ರಕಾಶ್ ರಾಜ್ ಮಾತನಾಡಿ, 11 ಅಪರಾಧಿಗಳನ್ನು ಸನ್ನಡತೆ ಹಾಗೂ ಅನಾರೋಗ್ಯ ಕಾರಣದಿಂದ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಸರ್ಕಾರ ಹೇಳುತ್ತಿದೆ. ಆದರೆ,ಒಂದೇ ಪ್ರಕರಣಕ್ಕೆ ಸಂಬಂಧಿಸಿದ 11 ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿರುವುದು ಅನುಮಾನ ಹುಟ್ಟಿಸುತ್ತದೆ. ಈ ರೀತಿ ಅಪರಾಧಿಗಳನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರ ಅತ್ಯಾಚಾರಿಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.
ಗುಜರಾತ್‌ನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಅತ್ಯಾಚಾರ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ಬಿಜೆಪಿಯ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಹೋರಾಟಗಾರ ಪ. ಮಲ್ಲೇಶ್, ರಂಗಾಯಣ ಮಾಜಿ ನಿರ್ದೇಶಕರಾದ ಸಿ. ಬಸವಲಿಂಗಯ್ಯ, ಎಚ್. ಜನಾರ್ದನ್ ಹಾಗೂ ಇತರರು ಪಾಲ್ಗೊಂಡಿದ್ದರು.