ಜಿಲ್ಲೆ

ಯೋಜನೆ ವಿರೋಧಿಸಿ ಹೆದ್ದಾರಿ ತಡೆದು ಪ್ರತಿಭಟನೆ

ಗಂಗಾಧರ ಬಿ ವಿ

* ಬ್ಯಾರಿಕೇಡ್​ ತಳ್ಳಿ ಡಿಸಿ ಕಚೇರಿಗೆ ನುಗ್ಗಲು ಯತ್ನ

ರಾಮನಗರ

ಬಿಡದಿ ಸಮಗ್ರ ಉಪನಗರ ಯೋಜನೆಗೆ ಸ್ವಾಧಿನಪಡಿಸಿಕೊಳ್ಳುತ್ತಿರುವ ಜಮೀನಿಗೆ ದರ ನಿಗದಿ ಸಂಬಂಧ ಕೆಲವರೊಂದಿಗೆ ಮಾತ್ರ ಸಭೆ ನಡೆಸಲಾಗುತ್ತಿದೆ ಎಂದು ಆಕ್ರೋಶಗೊಂಡ ರೈತರು ಬೆಂಗಳೂರು&ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರು.

ಗುರುವಾರ ಜಿಲ್ಲಾಧಿಕಾರಿ ಸಭೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಯೋಜನೆಯ ವಿರೋಧಿ ರೈತರು ಪ್ರತಿಭಟನೆ ಕೈಗೊಂಡು, ಕೆಲ ರೈತರನ್ನಷ್ಟೇ ಸಭೆಗೆ ಸೀಮಿತಗೊಳಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಸಭೆಯಲ್ಲಿ ತಮಗೂ ಭಾಗವಹಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ರೆತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಪೊಲೀಸರಮಾತಿಗೂ ಮಣೆಹಾಕದ ರೈತರು, ಮಾರ್ಗಮಧ್ಯೆಯೇ ಕುಳಿತು ಎರಡು ಬದಿಯ ರಸ್ತೆಯನ್ನು ತಡೆದರು. ಪರಿಣಾಮ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಪ್ರತಿಭಟನಾಕಾರರು ಪಟ್ಟುಬಿಡದ ಕಾರಣ ಕೊನೆಗೆ ಪೊಲೀಸರು ವಾಹನ ಸಂಚಾರಕ್ಕೆ ಮಾರ್ಗ ಬದಲಾಯಿಸಿದರು. ಕೆಲಹೊತ್ತಿನ ಬಳಿಕ ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಂಡು ಜಿಲ್ಲಾಧಿ-ಕಾರಿ ಕಚೇರಿ ಎದುರು ಹಾಕಲಾಗಿದ್ದ ಬ್ಯಾರಿಕೇಡ್​ಗಳನ್ನು ತಳ್ಳಿ ಡಿಸಿ ಕಚೇರಿಗೆ ನುಗ್ಗಲು ರೈತರು ಮುಂದಾದರು.

ರಣರಂಗವಾದ ಸಭಾಂಗಣ

ಒಂದೆಡೆ ರೈತರು ಹೊರಗಡೆ ಪ್ರತಿಭಟನೆ ಮಾಡುತ್ತಿದ್ದರೆ ಮತ್ತೊಂದೆಡೆ, ಮಾಜಿ ಶಾಸಕ ಎ.ಮಂಜುನಾಥ್​ ನೇತೃತ್ವದಲ್ಲಿ ಸಭೆಗೆ ಬಂದ ಕೆಲ ರೈತರು ಹಾಗೂ ಈಗಾಗಲೇ ಸಭೆಯಲ್ಲಿದ್ದ ಕೆಲ ರೈತರ ನಡುವೆ ಮಾತಿನ ಚಕಮಕಿ ನಡೆದು ಸಭಾಂಗಣ ರಣರಂಗವಾಯಿತು. ಈ ವೇಳೆ ಮಂಜುನಾಥ್​ ಮಾತನಾಡಿ, ರೈತರ ಸಭೆ ಕರೆದು ಕೇವಲ 30 ಮಂದಿಯನ್ನಷ್ಟೇ ಕೂರಿಸಿಕೊಂಡು ಸಭೆ ಮಾಡುತ್ತಿದ್ದೀರಿ, ಉಳಿದವರು ಎಲ್ಲಿದ್ದಾರೆ? ಹೊರಗಿರುವ ಸಾವಿರಾರು ರೈತರ ಕತೆ ಏನು ಎಂದು ಜಿಲ್ಲಾ-ಧಿಕಾರಿಗಳನ್ನು ಪ್ರಶ್ನಿಸಿದರು. ರೈತರನ್ನು ಬೀದಿಯಲ್ಲಿ ಬಿಟ್ಟು, ತಮ್ಮಷ್ಟಕ್ಕೆ ತಾವು ಸಭೆ ಮಾಡುವುದು ಸರಿಯೇ?. ನೀವು ನಮ್ಮ ರೈತರಿಗೆ ಅವಮಾನ ಮಾಡುತ್ತಿದ್ದೀರಿ, ಇಲ್ಲಿ ನಿಮಗೆ ಬೇಕಾದವರನ್ನು ಕೂರಿಸಿ ಕೊಂಡು ಸಭೆ ನಡೆಸುವುದಲ್ಲ... ಈ ಯೋಜನೆಗೆ ನಾವ್ಯಾರು ಭೂಮಿ ಕೊಡುವುದಿಲ್ಲ. ಹೊರಗಿರುವ ರೈತರೆಲ್ಲರೂ ಅದನ್ನೇ ಹೇಳುವುದಕ್ಕೆ ಬಂದಿದ್ದಾರೆ. ಈ ಸಭೆಗಾಗಲಿ, ದರ ನಿಗದಿಗಾಗಲಿ ನಮ್ಮ ಸಮ್ಮತಿ ಇಲ್ಲ. ಯೋಜನೆ ವಿರೋಧಿಸುವ ರೈತರೇ ಜಾಸ್ತಿ ಇದ್ದಾರೆ. ಹೀಗಾಗಿ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ನಿಯಮಗಳ ಚೌಕಟ್ಟಿನಲ್ಲಿ ಆಡಳಿತ ನಡೆಸಲು ಕುಳಿತಿದ್ದೇನೆಯೇ ಹೊರತು ರಾಜಕೀಯ ಮಾಡಲು ಅಲ್ಲ. ಯೋಜನಾ ಪ್ರದೇಶದ ಜಮೀನುಗಳ ಮಾಲೀಕರನ್ನು ಗುಂಪು ಗುಂಪಾಗಿ ಕರೆದು ಸಭೆ ನಡೆಸಿ, ಅವರ ಅಭಿಪ್ರಾಯ ಸ್ವೀಕರಿಸಲಾಗುತ್ತಿದೆ. ಎಷ್ಟೇ ಹೊತ್ತಾದರೂ ಎಲ್ಲರ ಅಭಿಪ್ರಾಯ ಸಂಗ್ರಹಿಸುವೆ. ಹಾಗಂತ, ಯೋಜನಾ ಪ್ರದೇಶದವರಲ್ಲದವರ ಜತೆ ಸಭೆ ನಡೆಸುವುದಿಲ್ಲ. ಗ್ರಾಮ ಅಥವಾ ಪಂಚಾಯಿತಿ ಮಟ್ಟದಲ್ಲೂ ಸಭೆ ನಡೆಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಕಚೇರಿ ಮಟ್ಟದಲ್ಲೇ ಸಭೆ ನಡೆಸಬೇಕಿದ್ದು, ಅದರಂತೆ ನಡೆದುಕೊಳ್ಳುತ್ತಿರುವೆ ಎಂದು ಹೇಳಿದರು.

ಅಷ್ಟೊತ್ತಿಗಾಗಲೇ ಯೋಜನೆಯ ಪರ ಇರುವ ರೈತರು ಮತ್ತು ವಿರುದ್ಧ ಇರುವ ರೈತರ ನಡುವೆ ಜಿಲ್ಲಾ-ಧಿಕಾರಿ ಸಮ್ಮುಖದಲ್ಲಿಯೇ ಮಾತಿನ ಚಕಮಕಿ ಶುರುವಾಗಿತ್ತು. ಯೋಜನೆಯನ್ನು ವಿರೋಧಿ-ಸುತ್ತಿರುವ ರೈತರೊಬ್ಬರು ಎದ್ದು ನಿಂತು, ಈಗ ಇವರನ್ನೆಲ್ಲಾ ಹೊರಗೆ ಕಳುಹಿಸಿ, ನಾವು ಇನ್ನೊಂದು ಬ್ಯಾಚ್​ ರೈತರನ್ನು ಸಭೆಗೆ ಕಳುಹಿಸುತ್ತೇವೆ ಎನ್ನುತ್ತಿದ್ದಂತೆ ಸಭಾಂಗಣದಲ್ಲಿ ಕೋಲಾಹಲವೇ ಸಷ್ಟಿಯಾಯಿತು. ನಮ್ಮನ್ನು ಕಳುಹಿಸಿ ಎನ್ನುವುದಕ್ಕೆ ನೀನ್ಯಾರು? ಎಂದು ಏಕವಚನದಲ್ಲಿಯೇ ಶುರುವಾದ ಗಲಾಟೆ ಕೆಲಕಾಲ ಡಿಸಿ ಕೋರ್ಟ್​ ಸಭಾಂಗಣದಲ್ಲಿ ಗೊಂದಲ ಉಂಟಾಗುವಂತೆ ಮಾಡಿತು. ಕೊನೆಗೆ ಸಭೆಯಲ್ಲಿದ್ದ ರೈತ ಮಹಿಳೆಯರು ಸಹ ಎದ್ದು ನಿಂತು ಏರುಧ್ವನಿಯಲ್ಲಿ ಮಾತನಾಡಲು ಶುರುಮಾಡುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.