ಮೈಸೂರು: ಕನ್ನಡ ನಾಮಫಲಕಗಳ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕದಿರುವುದನ್ನು ವಿರೋಧಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಗುರುವಾರ ನಗರದ ರಾಜ್‌ಕುಮಾರ್ ಉದ್ಯಾನವನದ ಮುಂಭಾಗ ಪ್ರತಿಭಟನೆ ನಡೆಯಿತು.
ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು ಮತ್ತು ಜಾಹೀರಾತು ಫಲಕಗಳು ಶೇ.60ರಷ್ಟು ಕನ್ನಡದಲ್ಲಿ ಇರಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಕೆಲವರು ನ್ಯಾಯಾಲಯದ ಮೆಟ್ಟಿಲನ್ನೇರಿದ್ದರಿಂದ ವಿಧಾಸಭೆಯ ಕಲಾಪದಲ್ಲಿ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ರಾಜ್ಯಪಾಲರು ವಿಧಾನಮಂಡಲದಲ್ಲಿ ಬಗೆಹರಿಸಿಕೊಳ್ಳಿ ಎಂದು ಸುಗ್ರೀವಾಜ್ಞೆಗೆ ತಡೆ ನೀಡಿದಿದ್ದಾರೆ. ಈಗಾಗಲೇ ಎರಡು ಬಾರಿ ಗಡುವು ನೀಡಿದರೂ ನಾಮಫಲಕಗಳು ಯಥಾಸ್ಥಿತಿಯಲ್ಲಿವೆ. ವಿಧಾನ ಮಂಡಲದ ಕಲಾಪ ತಡವಾಗಿದ್ದರಿಂದ ರಾಜ್ಯಪಾಲರಿಗೆ ಆದೇಶ ಪ್ರತಿ ಕಳಿಸಿದರೂ ರಾಜ್ಯಪಾಲರು ಇದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯಪಾಲರು ತಮ್ಮ ಕರ್ತವ್ಯ ಮರೆತಿದ್ದಾರೆ. ಕೆಲವೊಂದು ವಿಷಯಗಳನ್ನು ವಿಧಾನಸಭೆ ಮಂಡಲದಲ್ಲಿ ಚರ್ಚಿಸಲು ತಡವಾದಾಗ ಈ ರೀತಿಯ ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳ ಬೆಂಬಲ ಇರುವುದರಿಂದ ರಾಜ್ಯಪಾಲರು ಸಹಿ ಮಾಡಬಹುದಿತ್ತು. ಕನ್ನಡ ನಾಮಫಲಕ ಅಳವಡಿಕೆ ಗೊಂದಲದ ವಿಷಯವಲ್ಲ. ಇದು ನಮ್ಮ ನಾಡು-ನುಡಿ, ಭಾಷೆಯ ವಿಷಯ. ನೆರೆ ರಾಜ್ಯಗಳಲ್ಲಿ ಈ ವಿಷಯಕ್ಕೆ ರಾಜ್ಯಪಾಲರ ಮೊರೆ ಹೋಗುವುದಿಲ್ಲ. ಆದರೆ, ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಸಿಎಂ ರಾಜ್ಯಪಾಲರಿಗೆ ಅನುಮೋದನೆಗೆ ಕಳುಹಿಸಿರುವುದು ಸರಿಯಲ್ಲ. ಅವರೇ ನಿರ್ಧಾರ ಕೈಗೊಳ್ಳಬಹುದು. ಇದರ ಹಿಂದೆ ದೊಡ್ಡ ದೊಡ್ಡ ಮಾಲ್‌ಗಳ ಕೈವಾಡವಿರುವ ಶಂಕೆಯಿದೆ. ಕೂಡಲೇ ಸರ್ಕಾರ ರಾಜ್ಯಪಾಲರನ್ನು ಬಿಟ್ಟು ಕನ್ನಡ ನಾಮಫಲಕದ ಆದೇಶ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾ ಬೀದಿ ರವಿ, ಗುರುಬಸಪ್ಪ, ಗೋಪಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಎಲ್‌ಐಸಿ ಸಿದ್ದಪ್ಪ, ಸ್ವಾಮಿಗೌಡ, ಬೀಡಾ ಬಾಬು, ಸ್ವಾಮಿ ಗೈಡ್, ಮಾಲಿನಿ, ಭವಾನಿ, ಪುಷ್ಪ ಇತರರಿದ್ದರು.