ಹನೂರು: ಕಾಡಾನೆಯ ಹಾವಳಿಯಿಂದ ಬೇಸತ್ತಿರುವ ತಾಲೂಕಿನ ಆಂಡಿಪಾಳ್ಯ ಹಾಗೂ ಬೂದಿಪಡಗ ಭಾಗದ ರೈತರು ಮಂಗಳವಾರ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಾಡಾನೆಯೊಂದು ರಾತ್ರಿ ವೇಳೆ ತೋಟದ ಮನೆ, ಜಮೀನುಗಳಿಗೆ ಲಗ್ಗೆ ಇಡುತ್ತಿದ್ದು, ಮಾವು, ಹಲಸು ಹಾಗೂ ತೆಂಗಿನ ಮರಗಳನ್ನು ನಾಶಪಡಿಸುತ್ತಿದೆ. ಅಲ್ಲದೆ ಫಸಲನ್ನು ತುಳಿದು ಹಾಳು ಮಾಡುತ್ತಿದೆ. ಜತೆಗೆ ಭಾನುವಾರ ರಾತ್ರಿ ಆಂಡಿಪಾಳ್ಯದ ಕೃಷ್ಣ ಎಂಬುವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ, ಹಸುವೊಂದನ್ನು ತುಳಿದು ಸಾಯಿಸಿದೆ. ಕಾಡಾನೆ ಆಗಾಗ್ಗೆ ಜಮೀನುಗಳಿಗೆ ಲಗ್ಗೆ ಇಡುತ್ತಿರುವುದರಿಂದ ತೋಟದ ಮನೆ ನಿವಾಸಿಗಳಲ್ಲಿ ಜೀವಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಬೇಸತ್ತು ಇನ್ನಾದರೂ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಕಾಡಾನೆ ಹಾವಳಿಯನ್ನು ತಪ್ಪಿಸಲು ಕ್ರಮಕೈಗೊಳ್ಳುವ ಸಲುವಾಗಿ ಆಂಡಿಪಾಳ್ಯ ಭಾಗದ 3 ಕಡೆಗಳಲ್ಲಿ ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಾಲು, ಸೆಂದಿಲ್, ರಾಜನ್ ಹಾಗೂ ಇನ್ನಿತರರು ಇದ್ದರು.