ಕಾಸರಗೋಡು: ಜನರಲ್ ಆಸ್ಪತ್ರೆಯ ಶೋಚನೀಯಾವಸ್ಥೆ, ಅಭಿವೃದ್ಧಿ ಶೂನ್ಯ ಹಾಗೂ ದುರಾಡಳಿತದಿಂದ ಕೂಡಿದ ನಗರಸಭೆ ವಿರುದ್ಧ ಬಿಜೆಪಿ ಕಾಸರಗೋಡು ನಗರಸಭಾ ಸಮಿತಿ ನೇತೃತ್ವದಲ್ಲಿ ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಬಿಜೆಪಿ ರಾಜ್ಯ ಸಮಿತಿ ಕೋ ಆರ್ಡಿನೇಟರ್ ವಿ.ಕೆ.ಸಜೀವನ್ ಮಾತನಾಡಿ, ಕೇರಳದಲ್ಲಿ ಅತಿ ಹೆಚ್ಚು ವಿಜಿಲೆನ್ಸ್ ತನಿಖೆಗಳನ್ನು ಎದುರಿಸುತ್ತಿರುವ ನಗರಸಭೆಯಾಗಿ ಕಾಸರಗೋಡು ನಗರಸಭೆ ಮಾರ್ಪಟ್ಟಿದೆ. ನಗರಸಭೆ ಇಂದು ಭ್ರಷ್ಟಾಚಾರ, ವಿವಿಧ ಯೋಜನೆಗಳು ಮತ್ತು ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿ ಹಲವಾರು ತನಿಖೆಗಳನ್ನು ಎದುರಿಸುತ್ತಿರುವುದು ಇದಕ್ಕೆ ನಿದರ್ಶನ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರುವ ಶೋಚನೀಯಾವಸ್ಥೆ ಕೇರಳದ ಮತ್ತೊಂದು ಸರ್ಕಾರಿ ಆಸ್ಪತ್ರೆಯಲ್ಲಿ ಕಂಡುಬರಲು ಸಾಧ್ಯವಿಲ್ಲ ಎಂದರು.
ಬಿಜೆಪಿ ನಗರ ಸಮಿತಿ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ, ಮುಖಂಡರಾದ ಕೆ.ಸವಿತಾ, ಗುರುಪ್ರಸಾದ್ ಪ್ರಭು, ಉಮಾ ಕಡಪ್ಪುರ, ಕೆ.ಜಿ.ಪವಿತ್ರಾ, ಹೇಮಲತಾ ಶೆಟ್ಟಿ, ರಂಜಿತಾ, ಅಶ್ವಿನಿ, ಕೆ.ಆರ್.ಹರೀಶ್, ಶಾರದಾ, ವಿಮಲಾ, ಶ್ರೀಲತಾ ಧರಣಿ ನೇತೃತ್ವ ವಹಿಸಿದ್ದರು. ಜಿಲ್ಲಾ ಸಮಿತಿ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ನಗರ ಸಮಿತಿ ಕಾರ್ಯದರ್ಶಿ ದಯಾನಂದ ಪೂಜಾರಿ ಮತ್ತಿತರರಿದ್ದರು.