ಜಿಲ್ಲೆ

ಇಂದ್ರಾಳಿ ರೈಲ್ವೆ ಮೇಲ್ವೇತುವೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಇಂದ್ರಾಳಿ ರೈಲ್ವೆ ಮೇಲ್ವೇತುವೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ಬಳಷ್ಟು ತೊಂದರೆಯಾಗುತ್ತಿದೆ. ರೈಲ್ವೇ ಇಲಾಖೆ ಮತ್ತು ಹೆದ್ದಾರಿ ಇಲಾಖೆ ಸಮನ್ವಯದ ಕೊರತೆಯಿಂದ ಸಮಸ್ಯೆ ಜಟಿಲವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಈ ಕಾಮಗಾರಿಯನ್ನು ಮುಗಿಸಿ ಚತುಷ್ಪಥ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಸಾವಿರಾರು ಜನರೊಂದಿಗೆ ದೊಡ್ಡ ಮಟ್ಟದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಇಂದ್ರಾಳಿ ಸೇತುವೆ ಹೋರಾಟ ಸಮಿತಿ ಸಂಚಾಲಕ ಅಮೃತ್​ ಶೆಣೈ ಹೇಳಿದರು.

ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಇಂದ್ರಾಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಡಾ. ಎ.ವಿ. ಬಾಳಿಗಾ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಮಾತನಾಡಿ, ಜನರು ಹಕ್ಕುಗಳನ್ನು ಕೇಳುವಾಗ ಯಾವುದೇ ಪಕ್ಷದ ಮುಲಾಜಿಗೆ ಬೀಳಬಾರದು. ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ರಸ್ತೆಗಳಲ್ಲಿ ಸಂಚಾರ ಸಮಸ್ಯೆ ಎದುರಾಗಿದೆ. ಜನಪ್ರತಿನಿಧಿಗಳು ಈ ಬಗ್ಗೆ ಆಸ್ಥೆ ವಹಿಸುತ್ತಿಲ್ಲ. ಹೀಗಾಗಿ ಜನರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಜೂ.15ರೊಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಮಾನ&ಮರ್ಯಾದೆ ಇದ್ದರೆ ಮಾತು ತಪ್ಪಬಾರದು ಎಂದು ಆಕ್ರೋಶವ್ಯಕ್ತಪಡಿಸಿದರು.

ನಿವೃತ್ತ ಉಪನ್ಯಾಸಕ ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು, ನಗರಸಭೆ ಮಾಜಿ ಉಪಾಧ್ಯಕ್ಷ ಕುಶಲ ಶೆಟ್ಟಿ, ಸಮಿತಿ ಪದಾಧಿಕಾರಿಗಳಾದ ಜ್ಯೋತಿ ಹೆಬ್ಬಾರ್​, ಅನ್ಸಾರ್​ ಅಹಮ್ಮದ್​, ಜಯನ್​ ಮಲ್ಪೆ ಕುಶಾಲ್​ ಶೆಟ್ಟಿ, ಅಝೀಝ್​ ಉದ್ಯಾವರ, ಕೀರ್ತಿ ಶೆಟ್ಟಿ, ಸುರೇಶ್​ ಶೆಟ್ಟಿ ಬನ್ನಂಜೆ, ನಗರಸಭಾ ವಿರೋಧ ಪಕ್ಷದ ನಾಯಕ ರಮೇಶ್​ ಕಾಂಚನ್​, ಮಹಾಬಲ ಕುಂದರ್​, ಚಂದ್ರಮೋಹನ್​, ಶ್ರೀಧರ್​, ಚಾರ್ಲ್ಸ್​ ಅಂಬ್ಲರ್​, ರಮೇಶ್​ ತಿಂಗಳಾಯಿ ಸುರೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಹೆದ್ದಾರಿ ತಡೆ

ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ವಿಳಂಬ -ಖಂಡಿಸಿ ರಾಷ್ಟ್ರೀಯ ಹೆದ್ದಾರಿ 169ಎ ತಡೆದು ಪ್ರತಿಭಟನೆ ನಡೆಸಲಾಯಿತು. ಹೆದ್ದಾರಿ ಸಂಚಾರವನ್ನು ತಡೆದ ಪ್ರತಿಭಟನಾಕಾರರ ಮನವೊಲಿಸಿದ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಿದರು. ನೂರಾರು ಸಾರ್ವಜನಿಕರು ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿದ್ದರು.