ಕಾಸರಗೋಡು: ಶಿಕ್ಷಕರ ದಿನವೇತನ ಆಧಾರದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಲಾಗುವ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನಡೆಸುತ್ತಿರುವ ಭ್ರಷ್ಟಾಚಾರ ಖಂಡಿಸಿ ಡಿಸಿಸಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಲಾಯಿತು.
ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ಧರಣಿ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ವಿಚಾರದಲ್ಲಿ ಸರ್ಕಾರ, ಶಿಕ್ಷಣ ಇಲಾಖೆ, ಉದ್ಯೋಗ ವಿನಿಮಯ, ಪಿಎಸ್‌ಸಿ ಸೇರಿದಂತೆ ಹಲವು ವ್ಯವಸ್ಥೆ ಬುಡಮೇಲುಗೊಳಿಸಿ, ಸಿಪಿಎಂ, ಡಿವೈಎಫ್‌ಐ ಸೇರಿದಂತೆ ಎಡಪಕ್ಷಗಳ ಕಾರ್ಯಕರ್ತರನ್ನು ಇಂಥ ಹುದ್ದೆಗಳಿಗೆ ಸೇರ್ಪಡೆಗೊಳಿಸುತ್ತಿರುವುದು ಖಂಡನೀಯ. ಶಾಲಾ ವರ್ಷ ಆರಂಭವಾಗುತ್ತಿರುವ ಸಂದರ್ಭ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಅನುದಾನ ಹಾಗೂ ಉಚಿತ ಶಿಕ್ಷಣ ಸವಲತ್ತು ವ್ಯವಸ್ಥಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ದಲಿತ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಪಿ.ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪ್ರಭಾಕರನ್, ಮುಖಂಡರಾದ ಕೆ.ಪಿ.ಮೋಹನನ್, ದಿಲೀಪ್ ಕುಮಾರ್, ಕೆ.ಸಿಂಧು, ಕೆ.ಕುಞಿಕೃಷ್ಣನ್, ಕುಸುಮಾ ಚೇನಕ್ಕೋಡ್, ರಾಮ ಪಟ್ಟಾಜೆ, ಬಾಬು ಬಂದ್ಯೋಡು, ಸಜೀಶ್ ಕೈದಕ್ಕಾಡ್, ಕೊಟ್ಟರ ಸುಧಾಕರನ್, ರತ್ನಾಕರನ್, ರೇಷ್ಮಾ ಉಪಸ್ಥಿತರಿದ್ದರು.