ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸದೆ ವಂಚಿಸಲಾಗಿದೆ ಎಂದು ಆರೋಪಿಸಿ ಬುಧವಾರ ಅಂಬೇಡ್ಕರ್ ಸೇನೆಯಿಂದ ನಂಜನಗೂಡಿನಲ್ಲಿ ಪ್ರತಿಭಟನೆ ನಡೆಯಿತು. 
ಜಿಲ್ಲೆ

ಗ್ರಾಪಂಗಳಲ್ಲಿ ತೆರಿಗೆ ವಂಚನೆ ಖಂಡಿಸಿ ಪ್ರತಿಭಟನೆ

ನಂಜನಗೂಡು: ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸದೆ ವಂಚಿಸಲಾಗಿದೆ ಎಂದು ಆರೋಪಿಸಿ ಬುಧವಾರ ಅಂಬೇಡ್ಕರ್ ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.

ನಗರದ ತಾಲೂಕು ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ ಮಾತನಾಡಿ, ಬದನವಾಳು, ಹೆಡತಲೆ, ದೇವನೂರು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬದನವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಾಂಕ್ರೀಟ್ ಪ್ರಾಡಕ್ಟ್ ಕಂಪನಿಯೊಂದರ ಮಾಲೀಕರು ಕಾನೂನು ಉಲ್ಲಂಘನೆ ಮಾಡಿ ಪರವಾನಗಿ ನವೀಕರಿಸದೆ ಕಂಪನಿ ನಡೆಸಿಕೊಂಡು ಬಂದಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿಗೆ ತೆರಿಗೆ ಹಣ ಕಟ್ಟದೆ ವಂಚಿಸಲಾಗಿದೆ. ಹೆಡತಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೇ ನಂ.394,79,279/3ರಲ್ಲಿ ಎರಡು ಎಕರೆ ಜಮೀನಿನು ಭೂ ಪರಿವರ್ತನೆ ಮಂಜೂರಾಗಿದ್ದು, 2016ರವರೆಗೆ ತೆರಿಗೆ ಹಣ ಪಾವತಿಸಲಾಗಿದೆ. ಇನ್ನುಳಿದ ವರ್ಷದಲ್ಲಿ ಯಾವುದೇ ತೆರಿಗೆ ಪಾವತಿ ಮಾಡಿಲ್ಲ. ಕಟ್ಟಡ ಲೈಸೆನ್ಸ್, ನಕ್ಷೆ, ಅನುಮೋದನೆ ಪಡೆಯದೆ ಕಟ್ಟಡಗಳನ್ನು ನಿರ್ಮಿಸಿ ಕಲ್ಯಾಣ ಮಂಟಪವನ್ನು ತೆರೆದು ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಾಸದ ಮನೆ ಕಟ್ಟಿಕೊಟ್ಟಿದ್ದಾರೆ. ಇದಕ್ಕೆ ಯಾವುದೇ ತೆರಿಗೆ ನೀಡಿಲ್ಲ. ಹೆಡತಲೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಅಕ್ರಮವಾಗಿವೆ. ಎರಡು ಮೂರು ವರ್ಷಗಳ ಹಿಂದೆ ನಡೆದಿರುವ ಕೆಲಸ ಕಾರ್ಯಗಳಿಗೆ ಹಣವನ್ನು ಮತ್ತೆ ಜಮೆ ಮಾಡುತ್ತಿದ್ದಾರೆ. ಹಾಗೆಯೇ ಈ ಹಿಂದೆ ಕೂಲಿ ಕೆಲಸ ಮಾಡಿದವರನ್ನು ಬಿಟ್ಟು ಬೇರೆ ಮಧ್ಯವರ್ತಿಗಳ ಹೆಸರಿಗೆ ಹಣ ಹಾಕುತ್ತಿದ್ದಾರೆ ದೂರಿದರು.

ದೇವನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಪ್ರೈವೇಟ್ ಲಿಮಿಟೆಡ್ ಕಂಪನಿಯೊಂದರ ಮಾಲೀಕರು ತೆರಿಗೆಯನ್ನು ಪಾವತಿಸದೆ ವಂಚಿಸಿದ್ದಾರೆ. ತೆರಿಗೆ ಭ್ರಷ್ಟಾಚಾರದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಕಷ್ಟು ಬಾರಿ ಸಂಬಂಧ ಪಟ್ಟ ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿ ಅಧಿಕಾರಿಗಳು ಖಾಸಗಿ ಉದ್ಯಮಿಗಳ ಜತೆ ಶಾಮೀಲಾಗಿ ತೆರಿಗೆ ಹಣವನ್ನು ಸಮರ್ಪಕವಾಗಿ ತೆಗೆದುಕೊಳ್ಳದೆ ಅಕ್ರಮ ಎಸಗಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ತಾಂಡವವಾಡುತ್ತಿದೆ. ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ದೂರು ನೀಡಿದ್ದರೂ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸು ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೆರಾಲ್ಡ್ ರಾಜೇಶ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಬಳಿಕ ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆಯ ಗೌರವಾಧ್ಯಕ್ಷ ಗೀಕಳ್ಳಿ ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮುಳ್ಳೂರು ಸ್ವಾಮಿ, ತಾಲೂಕು ಅಧ್ಯಕ್ಷ ಜೆ.ಮಹದೇವಕುಮಾರ್, ಜಿಲ್ಲಾ ಸಂಚಾಲಕ ಬೊಕ್ಕಹಳ್ಳಿ ಮಹದೇವಸ್ವಾಮಿ, ನಗರಾಧ್ಯಕ್ಷ ಚೆಲುವರಾಜು, ತಾಲೂಕು ಗೌರವಾಧ್ಯಕ್ಷ ಮಹದೇವಸ್ವಾಮಿ, ಎಸ್.ಮಹದೇವು, ಸುರೇಂದ್ರ, ಚಿನ್ನಯ್ಯ, ಕಳಲೆ ಮಹೇಶ್, ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಜಿಎಂ ಪ್ರಸಾದ್ ಭಾಗವಹಿಸಿದ್ದರು.