ಜಿಲ್ಲೆ

ಕಬ್ಬು ಕಟಾವು ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

Mysuru - Desk - Naveen Kumar H P

ಮದ್ದೂರು : ಕಬ್ಬು ಕಟಾವು ದರ ಹೆಚ್ಚಳ ಖಂಡಿಸಿ ಹಾಗೂ ಅವ ಮುಗಿದಿದ್ದರೂ ಕಟಾವು ಕಾರ್ಯಕ್ಕೆ ಮುಂದಾಗದಿರುವ ತಾಲೂಕಿನ ಕೊಪ್ಪದ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ಅಕಾರಿಗಳ ವಿರುದ್ಧ ಸ್ಥಳೀಯ ರೈತರು ಹಾಗೂ ಕಬ್ಬು ಬೆಳೆಗಾರರು ಕಾರ್ಖಾನೆಯ ಮುಖ್ಯ ದ್ವಾರಕ್ಕೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಕೊಪ್ಪ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ಬಳಿ ಆಗಮಿಸಿದ ರೈತರು ಹಾಗೂ ಕಬ್ಬು ಬೆಳೆಗಾರರು ಕಾರ್ಖಾನೆ ಅಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಏಕಾಏಕಿ ಕಬ್ಬು ಕಟಾವು ದರ ಹೆಚ್ಚಳ ಮಾಡಿರುವ ಕ್ರಮವನ್ನು ಖಂಡಿಸಿದರು.

ಈಗಾಗಲೇ ಕಾರ್ಖಾನೆ ಪ್ರಾರಂಭಿಸಿ ಮೂರು ತಿಂಗಳು ಕಳೆದಿದ್ದರೂ ಸಮರ್ಪಕವಾಗಿ ಕಬ್ಬು ಕಟಾವು ಕಾರ್ಯಕ್ಕೆ ಅಕಾರಿಗಳು ಮುಂದಾಗದೆ ನಿರ್ಲಕ್ಷ ವಹಿಸಿರುವ ಪರಿಣಾಮವಾಗಿ ಜಮೀನಿನಲ್ಲೇ ಕಬ್ಬು ನಷ್ಟವುಂಟಾಗುತ್ತಿದ್ದು ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆಂದು ದೂರಿದರು.

ಕೊಪ್ಪ ಹೋಬಳಿ ಮತ್ತು ತಾಲೂಕು ವ್ಯಾಪ್ತಿಯ ಕಬ್ಬು ಬೆಳೆಗಾರರನ್ನು ನಿರ್ಲಕ್ಷ ವಹಿಸಿದ್ದು, ಮಂಡ್ಯ, ಪಾಂಡವಪುರ, ಕೆ.ಆರ್.ಪೇಟೆ ಮತ್ತು ಹೊರ ಜಿಲ್ಲೆಗಳಿಂದಲೂ ಕಬ್ಬನ್ನು ಕಾರ್ಖಾನೆಗೆ ಪೂರೈಕೆ ಮಾಡಿಸಿಕೊಳ್ಳುತ್ತಿದೆ. ಸ್ಥಳೀಯ ರೈತರ ಜಮೀನುಗಳಲ್ಲಿ 15 ತಿಂಗಳ ಅವ ಮುಗಿದಿದ್ದರೂ ಇದುವರೆವಿಗೂ ಕಟಾವು ಕಾರ್ಯಕ್ಕೆ ಮುಂದಾಗಿಲ್ಲವೆಂದು ಆರೋಪಿಸಿದರು.

ಕಾರ್ಖಾನೆಯು ನಿತ್ಯ 6 ಸಾವಿರ ಟನ್ ಕಬ್ಬು ಅರೆಯಲಿದ್ದು, ಕೇವಲ ಹೊರ ತಾಲೂಕು ಜಮೀನುಗಳಲ್ಲೇ ಕಬ್ಬು ಕಟಾವು ಮಾಡಲು ಬಳ್ಳಾರಿ, ಮಹಾರಾಷ್ಟ್ರ ಕೂಲಿ ಕಾರ್ಮಿಕರಿಂದ ಕಾರ್ಯ ನಿರ್ವಹಿಸುತ್ತಿದ್ದು, ಸಂಪೂರ್ಣವಾಗಿ ಸ್ಥಳೀಯ ರೈತರನ್ನು ನಿರ್ಲಕ್ಷ ಮಾಡಿದೆ. ರೈತರು ಇಳುವರಿ ಕಡಿಮೆಯಾಗಿ ಆರ್ಥಿಕ ಹೊರೆ ಹೊರುವಂತಾಗಿದೆ ಎಂದರು.

ಕಾರ್ಖಾನೆ ಪ್ರಾರಂಭದಲ್ಲಿ ಪ್ರತಿ ಟನ್‌ಗೆ 650 ರೂ. ಗಳಿಗೆ ಕಟಾವು ಮಾಡಲಾಗುತ್ತಿತ್ತು. ಬಳಿಕ 1100 ರೂ.ಗಳನ್ನು ನಿಗದಿ ಪಡಿಸಿದ್ದು, ಏಕಾಏಕಿ ಹೆಚ್ಚಿನ ಕಟಾವು ದರವನ್ನು ನಿಗದಿ ಮಾಡಿರುವುದರಿಂದ ರೈತರಿಗೆ ಆರ್ಥಿಕ ತೊಂದರೆ ಉಂಟಾಗಿದೆ. ಇದಕ್ಕೆ ಸಂಬಂಸಿದ ಕಾರ್ಖಾನೆ ಅಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳಿದರು.

ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಕಬ್ಬು ಬೆಳೆದು ನಿಂತಿದ್ದು, ಕೂಡಲೇ ಕಟಾವು ಕಾರ್ಯಕ್ಕೆ ಅಕಾರಿಗಳು ಕ್ರಮ ವಹಿಸದಿದ್ದಲ್ಲಿ ಈ ಭಾಗದ ಕಬ್ಬು ಬೆಳೆಗಾರರು ಮತ್ತು ರೈತರ ಜತೆಗೂಡಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕಾರ್ಖಾನೆ ಆಡಳಿತಾಕಾರಿ ಗೌರಿಪ್ರಕಾಶ್ ತಾಲೂಕು ಹಾಗೂ ಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಕಾರ್ಯ ನಡೆಯುತ್ತಿದ್ದು, ಕೆಲ ತಾಂತ್ರಿಕ ತೊಂದರೆಗಳಿಂದಾಗಿ ವಿಳಂಬವಾಗಿದೆ. ಮೂರು ದಿನಗಳೊಳಗಾಗಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಸ್ಥಳೀಯ ರೈತ ಮುಖಂಡರಾದ ಕೆಂಪಣ್ಣ, ಅಬಲವಾಡಿ ಅನಿಲ್, ದೇವರಾಜು, ಪುಟ್ಟ, ಪ್ರಮೋದ್, ಮನು, ಉದಯ್, ಸುದೀಪ್, ಮೋಹನ್, ರಮೇಶ್, ನಂದೀಶ್, ಜಯರಾಮು, ಕೃಷ್ಣ, ಜಗದೀಶ್, ಪಾಪಣ್ಣ ನೇತೃತ್ವ ವಹಿಸಿದರು.