ಜಿಲ್ಲೆ

ಇಂದು ಎಸ್‌ಟಿ ಸೇರ್ಪಡೆ ವಿರೋಧಿಸಿ ಪ್ರತಿಭಟನೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನಿರ್ದೇಶನದಂತೆ ಕುರುಬ ಸಮುದಾಯ ಎಸ್‌ಟಿ ಗೆ ಸೇರ್ಪಡೆ ವಿರೋಧಿಸಿ ರಾಜ್ಯ ಸರ್ಕಾರ ವಿರುದ್ಧ ಸೆ.25 ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕರ್ನಾಟಕ ವಾಲ್ಮೀಕಿ ಸಮುದಾಯ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಾವಿರಾರು ಸಮುದಾಯದ ಮುಖಂಡರ ಸಮ್ಮುಖದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಪ್ರತಿಭಟನೆಗೆ ಸಮುದಾಯದ ಜನರು ಭಾಗವಹಿಸಬೇಕು ಎಂದು ಕರೆ ನೀಡಿದರು.

ಆರ್ಥಿಕವಾಗಿ ಬಲಿಷ್ಠರಾಗಿರುವ ಕುರುಬ ಸಮುದಾಯದವನ್ನು ಎಸ್ಟಿಗೆ ಸೇರಿಸಿದರೆ ವಾಲ್ಮೀಕಿ ಸಮಾಜದ ಜನತೆಗೆ ಈಗಿರುವ ರಾಜಕೀಯ ಪ್ರಾದ್ಯನತೆ ಕಡಿಮೆಯಾಗಲಿದೆ. ಸಮುದಾಯದ ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಸಿಎಂ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಲು ಹಿಂಜರಿಯುತ್ತಿದ್ದಾರೆ. ಬಿಜೆಪಿಯಲ್ಲಿರುವ ನಾಯಕರು ಚುನಾವಣೆಯಲ್ಲಿ ಕುರುಬ ಮತಗಳು ದೊರೆಯುವುದಿಲ್ಲ ಎಂಬ ಭಯ ಕಾಡುತ್ತಿದೆ ಎಂದು ಕಿಡಿಕಾರಿದರು.

ವಾಲ್ಮೀಕಿ ಸ್ವಾಮೀಜಿ ಕರೆದ ಸಭೆಯಲ್ಲಿ ಸಂಸದ ಈ.ತುಕಾರಾಮ್ ಹಾಗೂ ಬಿಜೆಪಿ ಮುಖಂಡ ಬಂಗಾರು ಹನುಮಂತು ಪರಸ್ಪರ ವಾಗ್ದಳಿ ನಡೆಸಿಕೊಂಡಿದ್ದಾರೆ. ಅದು ಬಿಟ್ಟು ಈ.ತುಕಾರಾಮ್ ಹಾಗೂ ಅವರ ಪತ್ನಿ, ಶಾಸಕ ಅನ್ನಪೂರ್ಣ ಸೇರಿ ಸಿಎಂ ಸಿದ್ದರಾಮಯ್ಯ ಬಳಿ ಎಸ್‌ಟಿ ಸೇರ್ಪಡೆ ಮಾಡುವುದನ್ನು ಕೈ ಬಿಡಿ ಎಂದು ಒತ್ತಾಯಿಸಲಿ. ಅಲ್ಲದೆ, ಬಂಗಾರು ಹನುಮಂತು ಬಿಜೆಪಿ ನಿಯೋಗ ಕರೆದುಕೊಂಡು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲಿ. ಅದು ಬಿಟ್ಟು ವೇದಿಕೆಯಲ್ಲಿ ಕಿತ್ತಾಡುವುದು ಶೋಭೆ ತರುವುದಿಲ್ಲ ಎಂದು ಕುಟುಕಿದರು. ಮುಖಂಡರಾದ ಜನಾರ್ದನನಾಯಕ, ಜಯರಾಂ, ರುದ್ರಪ್ಪ, ಸತ್ಯನಾರಾಯಣ, ಪುಷ್ಪಲತಾ, ಗೋವಿಂದಪ್ಪ ಇದ್ದರು.