ಜಿಲ್ಲೆ

ಕಳಪೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ

ಕಿರಣ್ ಗೌಡ.ಜಿ

ಕೆ.ಆರ್.ಪೇಟೆ: ತಾಲೂಕಿನ ಹಿರೀಕಳಲೆ ಗ್ರಾಪಂ ವ್ಯಾಪ್ತಿಯ ಅಣೆಚಾಕನಹಳ್ಳಿ ಗ್ರಾಮದಲ್ಲಿ ನರೇಗಾ ಕಾಮಗಾರಿಗಳು ಕಳಪೆಯಾಗಿದ್ದು, ಅಕ್ರಮ ನಡೆದಿರುವ ಬಗ್ಗೆ ಜಿಪಂ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ತೊಪ್ಪಿನಕಟ್ಟೆ ಹೂಳೆತ್ತುವುದು ಮತ್ತು ಏರಿ ನಿರ್ಮಿಸುವ ನರೇಗಾ ಕಾಮಗಾರಿಯಲ್ಲಿ ಕಟ್ಟೆ ಒತ್ತುವರಿ ತೆರವು ಮಾಡದೆ ಕಟ್ಟೆ ಹಳ್ಳಕ್ಕೆ ಅಡ್ಡಲಾಗಿ ನೀರು ಹರಿಯಲು ಅವೈಜ್ಞಾನಿಕವಾಗಿ ಎತ್ತರವಾಗಿ ಸೇತುವೆ ನಿರ್ಮಿಸಿ, ಎತ್ತರದ ಮೇಲ್ಭಾಗಕ್ಕೆ ಎರಡು ಪೈಪ್‌ಗಳನ್ನು ಹಾಕಿದ್ದಾರೆ. ಇದರಿಂದ ಸುತ್ತಮುತ್ತಲಿನ ರೈತರ ಜಮೀನಿಗಳು ಜಲಾವೃತಗೊಳ್ಳತ್ತಿವೆ. ಸೇತುವೆ ಕೂಡ ಗುಣಮಟ್ಟದಾಗಿಲ್ಲ. ಸೇತುವೆಯಲ್ಲಿ ಬಿರುಕು ಬಿಟ್ಟಿವೆ ಎಂದು ಆರೋಪಿಸಿದರು. ಬಳಿಕ ತೋಪಿನಕಟ್ಟೆಯನ್ನು ಮೊದಲಿಗೆ ಹೂಳೆತ್ತಿ ಸೇತುವೆಯನ್ನು ಮರು ನಿರ್ಮಿಸುವಂತೆ ಆಗ್ರಹಿಸಿದರು.

ಗ್ರಾಮದಲ್ಲಿ ಸ್ಮಶಾನ ಜಾಗವಿಲ್ಲ. ಬಡ ನಿವೇಶನ ರೈತರಿಗೆ ಹಂಚಿರುವ ನಿವೇಶನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸುಮಾರು ಆರೇಳು ಲಕ್ಷ ರೂ. ಅವ್ಯವಹಾರ ಮಾಡಿರುವುದಾಗಿ ಆರೋಪಿಸಿದರು. ಗ್ರಾಮದಲ್ಲಿ ಹೇಮಾವತಿ ಎಡದಂಡೆ ನಾಲೆಯ ವಿತರಣೆ ನಾಲೆ ಹರಿದಿದೆ. ಇದರಿಂದ ಜಮೀನಿಗೆ ನೀರಿನ ಸೌಲಭ್ಯ ಕಲ್ಪಿಸುವ ಸೀಳು ಕಾಲುವೆಗೆ ಸಿಮೆಂಟ್ ಪೈಪ್ ಅಳವಡಿಸಿ ಕಾಮಗಾರಿಯ ಬಿಲ್ ತೆಗೆದುಕೊಂಡ ನಂತರ ಸಿಮೆಂಟ್ ಪೈಪ್‌ಗಳನ್ನು ತೆಗೆದು ಹಾಕಿದ್ದಾರೆ. ಪೈಪ್‌ಗಳನ್ನು ಕೂಡ ಕಾಮಗಾರಿ ಸ್ಥಳದಲ್ಲಿ ಬಿಡದೆ ಹೊತ್ತೊಯ್ದಿದ್ದಾರೆ. ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು.

ಗ್ರಾಮದ ಖಾಸಗಿ ಜಮೀನಿನಲ್ಲಿ ಕಲ್ಯಾಣಿ ನಿರ್ಮಿಸಿದ್ದಾರೆ. ಕಲ್ಯಾಣಿ ನಿರ್ಮಿಸುವ ಮೊದಲು ಅಲ್ಲಿಯೇ ನೀರನ್ನು ಅಂಕನಾಥೇಶ್ವರ ದೇವಸ್ಥಾನದ ಪೂಜೆಗೆ ಬಳಸಲಾಗುತ್ತಿತ್ತು. ನಿರ್ಮಾಣದ ನಂತರ ಕಲ್ಯಾಣಿ ನೀರು ಸಂಪೂರ್ಣ ಕೊಳೆತು ಹೋಗಿದೆ. ಕಲ್ಯಾಣಿ ನೀರನ್ನು ಶುದ್ಧಿಗೊಳಿಸುವ ಕೆಲಸವನ್ನು ಕಲ್ಯಾಣಿ ನಿರ್ಮಿಸಿದ ಅಧಿಕಾರಿಗಳು ಮುಂದಾಗಿಲ್ಲ. ಕಲ್ಯಾಣಿ ನಿರ್ಮಾಣಕ್ಕೆ ಸರ್ಕಾರಿ ಹಣ 4 ಲಕ್ಷ ವೆಚ್ಚವಾಗಿದೆ. ಕಲ್ಯಾಣಿ ಉದ್ದೇಶವೇ ಈಡೇರಿಲ್ಲ. ಈಗಲಾದರೂ ಅಧಿಕಾರಿಗಳು ನೀರು ಶುದ್ಧೀಕರಿಸಿ ಪೂಜೆಗೆ ಬಳಸುವಂತೆ ಮಾಡಬೇಕು. ದೇವಸ್ಥಾನದ ಪೂಜೆಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಗ್ರಾಮದಲ್ಲಿ ನಡೆದಿರುವ ಎಲ್ಲ ಕಾಮಗಾರಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಮುಖಂಡರಾದ ತಮ್ಮಣ್ಣ, ಪ್ರಸನ್ನ, ಸತೀಶ್, ಚಂದ್ರಹಾಸ್, ತೇಜು, ಮೂರ್ತಿ, ಉಮೇಶ್, ಮಂಜು, ಅರವಿಂದ್ ಇತರರು ಇದ್ದರು.