ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಹೆಸರಲ್ಲಿ ಒಂದು ಕೈಯಲ್ಲಿ ಕೊಟ್ಟು ಎರಡು ಕೈಯಲ್ಲಿ ಕಿತ್ತುಕೊಳ್ಳುವ ಮೂಲಕ ಜನರ ಕೈಗೆ ಚೊಂಬು ಕೊಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ಜೂನ್ 17ರಂದು ಬೆಳಗ್ಗೆ 11ಕ್ಕೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದಲ್ಲದೇ ಅಕ್ಕಪಕ್ಕದ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ದರ ಕಡಿಮೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಗುಜರಾತ, ಹರಿಯಾಣಾ ಸೇರಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮಾರಾಟ ತೆರಿಗೆ ಹಾಕದೇ ಜನರ ಮೇಲೆ ಹೊರೆ ಹೇರಿಲ್ಲ. ಅಂತಹ ರಾಜ್ಯಗಳನ್ನು ಏಕೆ ಮಾದರಿಯಾಗಿ ಇಟ್ಟುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ತೊಗರಿ ಬೇಳೆ, ಅಕ್ಕಿ ಸೇರಿ ದಿನಸಿ ವಸ್ತುಗಳ ದರ ಏರುಮುಖವಾಗಿವೆ. ಮದ್ಯದ ಬೆಲೆ ಕೂಡ ಹೆಚ್ಚಾಗಿದೆ. ಸಾಲದೆಂಬಂತೆ ಉಳ್ಳವರು ಕುಡಿಯುವ ಪ್ರಿಮಿಯಂ ಮದ್ಯದ ದರ ಇಳಿಸಲು ಸರ್ಕಾರ ಮುಂದಾಗಿದೆ. ಹಾಗಾಗಿ ಈ ಸರ್ಕಾರ ಯಾರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದೇ ಪ್ರಶ್ನಾರ್ಹವಾಗಿದೆ ಎಂದರು.
ಇಂಧನ ದರ ಹೆಚ್ಚಳವಾದರೆ ದಿನನಿತ್ಯದ ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಲ್ಲ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದೆ. ಬರೀ ಬೆಲೆ ಹೆಚ್ಚಳ ಮಾಡಿರುವುದೇ ಕಾಂಗ್ರೆಸ್ ಸಾಧನೆಯಾಗಿದೆ ಎಂದರು.
ಹಲ್ಲೆಗೊಳಗಾದ ವ್ಯಕ್ತಿ:
ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರ ವಿರುದ್ಧ ಹೋರಾಡಿದ ಧಾರವಾಡದ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ. ಅಲ್ಲದೇ ಹಲ್ಲೆಗೆ ಒಳಗಾದವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಪರಾಧ ಚಟುವಟಿಕೆಯಲ್ಲಿ ತೊಡಗಿದವರ ಪರ ನಿಂತು ಸರ್ಕಾರ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಬೆಲ್ಲದ ಆರೋಪಿಸಿದರು.
ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರವಿದೆ. ಸಚಿವರೊಬ್ಬರು ಗೂಂಡಾಗಳ ಜತೆ ಸೆಟ್ಲಮೆಂಟ್ ವ್ಯವಹಾರದಲ್ಲಿ ತೊಡಗಿದ್ದಾರೆ. ಈ ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ ಎಂದರು.
ಬಿಜೆಪಿ ಮುಖಂಡರಾದ ರವಿ ನಾಯಕ, ದತ್ತಮೂತಿರ್ ಕುಲಕಣಿರ್, ನಿಂಗಪ್ಪ ಸುತಗಟ್ಟಿ, ಇತರರು ಇದ್ದರು.
ದರ್ಶನ್ ನಿಂದ ರಾಕ್ಷಸಿ ಪ್ರವೃತ್ತಿ…
ನಟ ದರ್ಶನ್ ಮಾಡಿರುವುದನ್ನು ನೋಡಿದರೆ ಆತ ಮನುಷ್ಯನೋ, ರಾಕ್ಷಸನೋ? ಎಂಬಂತಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ವಾಗ್ದಾಳಿ ನಡೆಸಿದರು.
ರೇಣುಕಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದರ್ಶನ ವರ್ತನೆ ಹೀಗಿರುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಅವನನ್ನು ಕೃಷಿ ಇಲಾಖೆ ರಾಯಭಾರಿ ಮಾಡಲಾಗಿತ್ತು. ಸರ್ಕಾರ ತಪ್ಪು ಮಾಡಿದಂತಾಗಿದೆ ಎಂದರು.
ಸಮಾಜ ವಿರೋಧಿ, ಕ್ರಿಮಿನಲ್ ಕೆಲಸ ಮಾಡಿರುವವರಿಗೆ ಠಾಣೆಯಲ್ಲಿ ರಾಜಾತಿಥ್ಯ ನೀಡುವವರಿಗೆ ಏನು ಹೇಳಬೇಕು? ರಾಜ್ಯದಲ್ಲಿ ಕ್ರಿಮಿನಲ್ ಚಟುವಟಿಕೆ ಹೆಚ್ಚಾಗಲು ಸರ್ಕಾರದ ನೀತಿಗಳೇ ಕಾರಣ ಎಂದು ದೂರಿದರು.