ಮೈಸೂರು: ಎಸ್‌ಸಿ, ಎಸ್‌ಟಿ ಯೋಜನೆಯ ಅನುದಾನವನ್ನು ಗಾಂಧಿನಗರದ ಅಭಿವೃದ್ಧಿಗೆ ನೀಡದೆ ಮೈಸೂರು ನಗರ ಮಹಾನಗರ ಪಾಲಿಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಪಾಲಿಕೆ ಆಯುಕ್ತರ ಕೊಠಡಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ನಿಧಿಯಡಿ ಲಭ್ಯವಿರುವ ಹೆಚ್ಚುವರಿ ಅನುದಾನಕ್ಕೆ ಸಿದ್ಧಪಡಿಸಿರುವ ಶೇ.24.10, ಶೇ.7.25, ಶೇ.5.00ರ ಕಾರ್ಯಕ್ರಮಗಳ ಅಡಿ ಕೈಗೊಂಡಿರುವ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಆದರೆ, ದುರದೃಷ್ಟವಶಾತ್ ಎಸ್‌ಸಿ ಸಮುದಾಯದವರು ಹೆಚ್ಚು ವಾಸಿಸುತ್ತಿರುವ ಮತ್ತು ಮೀಸಲು ಕ್ಷೇತ್ರವಾದ ವಾರ್ಡ್ ನಂ.28 ಗಾಂಧಿನಗರಕ್ಕೆ ಯಾವುದೇ ಅನುದಾನ ನೀಡಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪಾಲಿಕೆ ಅಧಿಕಾರಿಗಳು, ಶಾಸಕರು ದುರುದ್ದೇಶಪೂರ್ವಕವಾಗಿ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಲೇ ಬಂದಿದ್ದು, ಅದು ಈ ಸಲವೂ ಪುನರಾವರ್ತನೆಯಾಗಿದೆ. ಸರ್ಕಾರದ ಮಾರ್ಗಸೂಚಿಯನ್ನು ದುರುದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಈ ಅನ್ಯಾಯದ ಕುರಿತು ಕಾನೂನು ಹೋರಾಟವನ್ನೂ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈಗ ಆಗಿರುವ ತಾರತಮ್ಯ, ಅನ್ಯಾಯವನ್ನು ಸರಿಪಡಿಸಬೇಕು. ಅನುದಾನವನ್ನು ಗಾಂಧಿನಗರಕ್ಕೆ ಹಂಚಿಕೆ ಮಾಡಿ ಅಭಿವೃದ್ಧಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಸಂಘದ ಮುಖಂಡರಾದ ಎಂ.ಎ.ಶರತ್ ಸತೀಶ್, ಸಿ.ದೇವರಾಜು, ಎಸ್.ಸುರೇಶ್, ಬಿ.ರಾಜೇಶ್, ಅಶೋಕ್, ವಿಜಯ್, ಮಂಜುನಾಥ್, ವಿ.ರಾಜು ಇನ್ನಿತರರಿದ್ದರು