ನಿಡಗುಂದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಸಂಸದ ಅನಂತಕುಮಾರ ಹೆಗಡೆ ನಿಂದನೆ ಮಾಡಿರುವುದು ಸರಿಯಲ್ಲ. ಕೂಡಲೇ ಅವರು ಸಿಎಂ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಎಸ್ಸಿ ವಿಭಾಗದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ವಡವಡಗಿ ಒತ್ತಾಯಿಸಿದರು.
ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದಿಂದ ಅನಂತಕುಮಾರ ಹೆಗಡೆ ಹೇಳಿಕೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಒಬ್ಬ ಸಂಸದನಿಗೆ ಸಿಎಂ ಕುರಿತು ಯಾವ ರೀತಿ ಮಾತನಾಡಬೇಕು ಎಂಬುದು ಗೊತ್ತಿಲ್ಲ ಎಂದರೆ ಪ್ರಜಾಪ್ರಭುತ್ವ ಹೇಗೆ ಉಳಿಯುತ್ತದೆ. ಗ್ಯಾರಂಟಿ ಯೋಜನೆ ಜನರಿಗೆ ತಲುಪಿದ ಪರಿಣಾಮ ಬಿಜೆಪಿಗೆ ಲೋಕಸಭೆ ಚುನಾವಣೆ ಎದುರಿಸಲು ಕಷ್ಟವಾಗಿದೆ. ಜತೆಗೆ ಈಗಾಗಲೇ ವಿಶ್ವೇಶ್ವರ ಹೆಗಡೆ ಅಲ್ಲಿ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ. ಬೇರೆಯವರು ಚುನಾವಣೆಗೆ ನಿಲ್ಲುತ್ತಾರೆ ಎಂಬ ಕಾರಣಕ್ಕೆ ಏನೇನೋ ಮಾತನಾಡುವುದು ಸರಿಯಲ್ಲ. ನಾಲ್ಕು ವರ್ಷ ಮಲಗಿದ್ದ ಸಂಸದರು, ಚುನಾವಣೆ ಸಮೀಪಿಸುತ್ತಿದ್ದಂತೆ ಸಿಎಂ ವಿರುದ್ಧ ಹೇಳಿಕೆ ನೀಡಿ ನಿಂದಿಸಿದ್ದಾರೆ. ಇದರಿಂದ ಲೋಕಸಭೆ ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಮುಖಂಡ ಸಿದ್ದಣ್ಣ ನಾಗಠಾಣ ಮಾತನಾಡಿ, ಸಂಸದ ಅನಂತಕುಮಾರ ಹೆಗಡೆ ಅವರಿಗೆ ತಲೆ ಮತ್ತು ಬಾಯಿಗೆ ಲಿಂಕ್ ತಪ್ಪಿಹೋಗಿದೆ. ಅವರು, ಏನು ಮಾತನಾಡುತ್ತಾರೋ ಅವರಿಗೆ ತಿಳಿಯುತ್ತಿಲ್ಲ. ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸಿ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸಿದ್ದಾರೆ. ಈಗಾಗಲೇ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಪರಶುರಾಮ ಕಾರಿ, ಸಂಗಮೇಶ ಬಳಿಗಾರ, ಮೌಲಾಸಾಬ ಅತ್ತಾರ, ಆಂಜನೇಯ ಮೋಪಗಾರ, ಸಂಜು ಲಮಾಣಿ ಇತರರು ಮಾತನಾಡಿದರು. ಬಸಯ್ಯ ಗಣಾಚಾರಿ, ಶೇಖರ ರೂಡಗಿ, ರಮೇಶ ಮಾಗಿ, ಅಲಿ ಚಪ್ಪರಬಂದ, ಗಂಗಾಧರ ವಾರದ, ತಮ್ಮಣ್ಣ ಬಂಡಿವಡ್ಡರ, ರವಿ ವಡ್ಡರ, ಮೋತಿಸಾಬ ತಳೇವಾಡ, ಸುರೇಶ ಸಣ್ಣಮಣಿ, ಮಲ್ಲು ವಡವಡಗಿ, ಬಸವರಾಜ ಗಣಾಚಾರಿ, ಚಂದ್ರು ಹಳಮನಿ ಇತರರು ಪ್ರತಿಭಟನೆಯಲ್ಲಿದ್ದರು.