ಗುಂಡ್ಲುಪೇಟೆ: ತಾಲೂಕಿನ ಮೂಖಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಸದಸ್ಯರು ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಕಚೇರಿ ಎದುರು ಸಮಾವೇಶಗೊಂಡ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಬಣ) ಪದಾಧಿಕಾರಿಗಳು, ಪಿಡಿಒ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಸಿಪಿ, ಟಿಎಪಿ ಅನುದಾನದ ಕುರಿತು 10 ವರ್ಷಗಳ ಮಾಹಿತಿ, ಅಂಗವಿಕಲರಿಗೆ ಸಂಬಂಧಪಟ್ಟ ಶೇ.5 ಅನುದಾನ, ಸ್ಮಶಾನ ವಿಚಾರ, ಪಿಡಿಒ ಸಾರ್ವಜನಿಕರ ಕರೆ ಸ್ವೀಕರಿಸದಿರುವುದು, ಕರ್ತವ್ಯಕ್ಕೆ ಗೈರಾಗಿರುವ ಕುರಿತು ಮಾಹಿತಿ ನೀಡುವಂತೆ ಪಂಚಾಯಿತಿಗೆ ಅರ್ಜಿ ಕೊಟ್ಟಿದ್ದರೂ ನೀಡುತ್ತಿಲ್ಲ. ಖುದ್ದಾಗಿ ವಿಚಾರಿಸಿದರೂ ಸಬೂಬು ಹೇಳುತ್ತಿದ್ದಾರೆ. ಇದಾದ ಕೆಲ ಗಂಟೆಗಳ ನಂತರ ಪಿಡಿಒ ಕುಮ್ಮಕ್ಕಿನಿಂದ ಗ್ರಾಮ ಪಂಚಾಯಿತಿ ಸದಸ್ಯರು ದಸಂಸ ಸಂಘಟನೆ ಸದಸ್ಯರಿಗೆ ಕರೆ ಮಾಡಿ ಸಂಘಟನೆ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸುವುದರ ಜತೆಗೆ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ತಾಲೂಕು ಅಧ್ಯಕ್ಷ ನಾಗಮಲ್ಲು, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಶಿವಸ್ವಾಮಿ, ರಾಜೇಶ್, ಶಿವಕುಮಾರ್, ನಾಗರಾಜು, ಗೋಪಾಲ್, ನಾಗೇಂದ್ರ , ರವಿಶಂಕರ್, ಗೋಪಾಲ್ ಮತ್ತಿತರರು ಇದ್ದರು.