ಜಿಲ್ಲೆ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

Kodagu

ಮಡಿಕೇರಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘ, ಹಸಿರುಸೇನೆ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮಾನವಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ 1961ರ ಭೂ ಸುಧಾರಣೆ ಕಾಯ್ದೆಯ 79 ಎಬಿಸಿ ಮತ್ತು 80ನೇ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸಿದೆ. ಇದರಿಂದ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದಾಗಿದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈತ ಸಂಘ-ಹಸಿರು ಸೇನೆ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಮಾತನಾಡಿ, ಭೂ ಕಬಳಿಕೆ ಮಾಡುವ ಉದ್ದೇಶದಿಂದ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕೊಡಗಿನಲ್ಲಿ ಬ್ರಹ್ಮಗಿರಿಯಿಂದ ಪುಷ್ಪಗಿರಿಯವರೆಗೆ ಜಲಸಂಪನ್ಮೂಲವನ್ನು ಬಳಸಲಾಗುತ್ತಿದೆ. ಅಲ್ಲದೆ, ಇಡೀ ದಕ್ಷಿಣ ಭಾರತಕ್ಕೆ ಜಲ ಒದಗಿಸುತ್ತಿರುವ ಕೊಡಗು ಜಿಲ್ಲೆಗೂ ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಬಾರದು ಎಂದರು.

ಯಾವುದೇ ಕಾಯ್ದೆ ತಿದ್ದುಪಡಿ ಮಾಡುವ ಮುನ್ನ ಪರಾಮರ್ಶೆ ಮಾಡಬೇಕು. ಅದರಲ್ಲೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವಾಗ ರೈತರ ಗಮನಕ್ಕೆ ತಂದು ಅಭಿಪ್ರಾಯ ಸಂಗ್ರಹಿಸಿ ವ್ಯವಸ್ಥಿತವಾಗಿ ಮಾಡಬೇಕಿತ್ತು. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ತಿದ್ದುಪಡಿಯನ್ನು ವಾಪಾಸ್ ಪಡೆಯುವ ಮೂಲಕ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಬಳಿಕ ಅಪರ ಜಿಲ್ಲಾಧಿಕಾರಿ ಸ್ನೇಹಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ರೈತ ಸಂಘ-ಹಸಿರುಸೇನೆ ಕಾರ್ಯದರ್ಶಿ ಕಳ್ಳಿಚಂಡ ಧನು, ಖಜಾಂಚಿ ಕಾಳಪ್ಪ, ಸಂಚಾಲಕ ಮಹೇಶ್, ಪ್ರಮುಖರಾದ ನಡಿಕೇರಿಯಂಡ ರೋಷನ್ ತಮ್ಮಯ್ಯ, ವಿನು, ಮಂಜು, ದೀಪಾ, ಗಿರಿಸೋಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಪರಸ್ಪರ ಅಂತರಕ್ಕೆ ಪೊಲೀಸರ ಮನವಿ ಪ್ರತಿಭಟನೆ ಸಂದರ್ಭ ರಸ್ತೆ ಸಂಚಾರಕ್ಕೆ ತಡೆಯೊಡ್ಡಲು ಹೊರಟ ರೈತ ಸಂಘದ ಪದಾಧಿಕಾರಿಗಳನ್ನು ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮನವೊಲಿಸಿದರು.


ನಾವು ನಿಮ್ಮ ಹೋರಾಟಕ್ಕೆ ಸಹಕಾರ ನೀಡುತ್ತೇವೆ. ಈಗಾಗಲೇ ಕರೊನಾದಿಂದ ಜನರು ತತ್ತರಿಸಿ ಹೋಗಿದ್ದಾರೆ. ಪರಸ್ಪರ ಅಂತರ ಕಾಯ್ದುಕೊಳ್ಳಿ. ಮಾನವ ಸರಪಳಿ ಮಾಡಿ, ಆದರೆ ರಸ್ತೆ ಸಂಚಾರ ತಡೆ ಮೂಲಕ ಜನರಿಗೆ ತೊಂದರೆ ಮಾಡಬೇಡಿ ಎಂದು ಮನವಿ ಮಾಡಿದರು. ಪ್ರತಿಭಟನೆ ಸಂದರ್ಭ ಸ್ಥಳಕ್ಕಾಗಮಿಸಿದ ಡಿವೈಎಸ್‌ಪಿ ದಿನೇಶ್‌ಕುಮಾರ್ ಕೂಡ ಅಂತರ ಕಾಯ್ದುಕೊಳ್ಳುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರು.

ರೈತರ ಸಂಕಷ್ಟಕ್ಕೆ ಸರ್ಕಾರಕ್ಕೆ ಸ್ಪಂದಿಸುತ್ತಿಲ್ಲ. ಒಂದು ಹೆಕ್ಟೇರ್‌ಗೆ 20,000 ರೂ. ಸಹಾಯಧನ ನೀಡಿ ಗದ್ದೆ ಪಾಳು ಬೀಳದಂತೆ ನೋಡಿಕೊಳ್ಳುವ ಯೋಗ್ಯತೆ ಕೂಡ ಈ ಸರ್ಕಾರಕ್ಕಿಲ್ಲ. ಇಂತಹ ರಾಜ್ಯ ಸರ್ಕಾರವನ್ನು ಕಿತ್ತೊಗೆಯುವಂತಹ ಕೆಲಸ ರೈತರಿಂದ ಆಗಬೇಕಿದೆ’
ಚಿಮ್ಮಂಗಡಗಣೇಶ್, ಜಿಲ್ಲಾಧ್ಯಕ್ಷರು, ರೈತ ಸಂಘ-ಹಸಿರುಸೇನೆ