ಹುಬ್ಬಳ್ಳಿ: ದೇಶವ್ಯಾಪಿ ಬೇಡಿಕೆಗಳ ದಿನದ ಅಂಗವಾಗಿ ನಗರದಲ್ಲಿ ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಧಾರವಾಡ ಜಿಲ್ಲಾ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಹಣಕಾಸು ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.
ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು. ರೈತರ ಬೆಳೆಗಳಿಗೆ ಲಾಭದಾಯಕ ಬೆಂಬಲಬೆಲೆ ನೀಡುವ ಶಾಸನ ರೂಪಿಸಬೇಕು. ಬಿಸಿಯೂಟ ನೌಕರರು ಸೇರಿದಂತೆ ಸ್ಕೀಂ ನೌಕರರಿಗೆ ಕನಿಷ್ಟ ವೇತನ ಕಾಯ್ದೆ ಜಾರಿಮಾಡಬೇಕು. ಅಟೊ, ಹಮಾಲಿ ಮುಂತಾದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಕಲ್ಪಿಸಬೇಕು. ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲ ಸಾರ್ವಜನಿಕ ಕ್ಷೇತ್ರಗಳ ಖಾಸಗಿಕರಣವನ್ನು ಕೈಬಿಡಬೇಕು ಎಂಬ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಖಾರರು ಒತ್ತಾಯಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಸಿಐಟಿಯು ಜಿಲ್ಲಾಧ್ಯ ಬಿ.ಐ. ಈಳಿಗೇರ, ರೈತ ಮುಖಂಡ ಬಿ.ಎಸ್. ಸೊಪ್ಪಿನ, ವಿವಿಧ ಸಂಟನೆಗಳ ಮುಖಂಡರಾದ ಚನ್ನಮ್ಮ ಡೊಳ್ಳಿನ, ಸುನಂದಾ ಚಿಗರಿ, ಫಕ್ಕೀರವ್ವ ತೆಂಬದಮನಿ, ಹನಮಂತ ಅಂಬಿಗೇರ, ಚಿದಾನಂದ ಸವದತ್ತಿ, ರಫೀಕ್ ಮುಳಗುಂದ, ಪುಂಡಲೀಕ ಬಡಿಗೇರ, ಮುಸ್ತಾಕ ಕರ್ಜಗಿ, ಹಸನಖಾನ ಬಡೇಖಾನ, ಚನ್ನಪ್ಪ ಯಲಿಗಾರ ಮುಂತಾದವರು ಭಾಗವಹಿಸಿದ್ದರು.