ಜಿಲ್ಲೆ

ಕಮಲ್ ಹಾಸನ್ ವಿರುದ್ಧ ಆಕ್ರೋಶ: ಕರವೇ ಕಾರ್ಯಕರ್ತರ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕನ್ನಡ ಭಾಷೆ ತಮಿಳಿನ ಮಗಳು ಎಂದು ಉದ್ಧಟತನದ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ವಿರುದ್ಧ ನಗರದಲ್ಲಿ ಕರ್ನಾಟಕ ರಕ್ಷಣ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಹಾವೀರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ನಟ ಕಮಲ್ ಹಾಸನ್ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ಆತ ನಟಿಸಿರುವ ಎಲ್ಲ ಸಿನಿಮಾಗಳನ್ನು ಕನ್ನಡಿಗರು ಬಹಿಷ್ಕರಿಸುವ ಮೂಲಕ ಬಿಸಿ ಮುಟ್ಟಿಸಬೇಕೆಂದು ಆಗ್ರಹಿಸಿದರು.

ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ಕನ್ನಡ ಭಾಷೆಯ ಅವಹೇಳನಕಾರಿಯಾಗಿ ಮಾತನಾಡಿದಲ್ಲದೆ ಪ್ರೀತಿಯಿಂದ ಹೇಳಿದ್ದೇನೆ ಎಂದು ಸಮರ್ಥಿಸಿಕೊಳ್ಳುವ ಬದಲಿಗೆ ಕನ್ನಡಿಗರ ಮನಸ್ಸಿಗೆ ನೋವಾಗಿದ್ದಕ್ಕೆ ಕ್ಷಮೆ ಕೋರಿದ್ದರೆ ಅವರ ದೊಡ್ಡತನ ಎನ್ನಬಹುದಿತ್ತು. ಆದರೆ, ಮತ್ತೆ ಉದ್ದಟತನ ಪ್ರದರ್ಶನ ಮಾಡುವ ಮೂಲಕ ತಾನು ಜ್ಯೂನಿಯರ್ ಜಯಲಲಿತಾ ಎಂಬುದನ್ನ ಪ್ರದರ್ಶನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕನ್ನಡ ಚಿತ್ರಮಂಡಳಿ ಕಮಲ್ ಹಾಸನ್ ಸಿನಿಮಾ ಪ್ರದರ್ಶನ ನಿಷೇಧಿಸಿದ ಹಿನ್ನೆಲೆಯಲ್ಲಿ ತನ್ನ ಸಿನಿಮಾ ಥಗ್ಸ್ ಲೈಫ್ ಬಿಡುಗಡೆಗಾಗಿ ಕೋರ್ಟ್‌ಗೆ ಮೊರೆ ಹೋಗಿದ್ದಾನೆ. ಸಿನಿಮಾ ಬಿಡುಗಡೆಗೆ ನ್ಯಾಯಾಲಯ ಸಿನಿಮಾ ಅನುಮತಿ ನೀಡಿದರೂ, ರಾಜ್ಯದ ಯಾವುದೇ ಚಿತ್ರಮಂದಿರ ಆತನ ಸಿನಿಮಾ ಬಿಡುಗಡೆ ಮಾಡಬಾರದು. ಯಾವುದೇ ಚಿತ್ರಮಂದಿರ ಪ್ರದರ್ಶನ ಮಾಡಿದರೂ ಕರುನಾಡಿನ ಎಲ್ಲ ಜನತೆ ಚಿತ್ರಮಂದಿರಕ್ಕೆ ಹೋಗಿ ತಿರಸ್ಕರಿಸುವ ಮೂಲಕ ಸ್ವಾಭಿಮಾನ ಪ್ರದಶನ ಮಾಡಬೇಕೆಂದು ಮನವಿ ಮಾಡುತ್ತೇವೆ ಎಂದರು.

ಅಂತೆಯೇ, ಕನ್ನಡದ ಎಲ್ಲ ಟಿವಿ ವಾಹಿನಿಗಳು, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲಿರುವ ಕಮಲ್ ಹಾಸನ್ ಸಿನಿಮಾ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಇದನ್ನು ಮೀರಿ, ಚಿತ್ರಮಂದಿರಗಳು ಚಿತ್ರ ಪ್ರದರ್ಶನ ಮಾಡುವ ಸಾಹಸ ಮಾಡಿದಲ್ಲಿ ಮುತ್ತಿಗೆ ಹಾಕಿ, ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವೆಂಕಟೇಶ್, ಸಿದ್ದೇಗೌಡ, ಸೋಮಶೇಖರ್ ಇತರರಿದ್ದರು.