ಮದ್ದೂರು: ಚಿತ್ರನಟ ಕಮಲ್ ಹಾಸನ್ ಕನ್ನಡದ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕಮಲ ಹಾಸನ್ ಈ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಅವರ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಎಚ್.ಎಸ್.ನಾಗೇಶ್ ಹುಲಿಕೆರೆ ಮಾತನಾಡಿ, ಕನ್ನಡ ಭಾಷೆಯ ಮಹತ್ವ ತಿಳಿದುಕೊಳ್ಳದೆ ಕಮಲ್ ಹಾಸನ್ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಕನ್ನಡ ಭಾಷೆಗೆ ತನ್ನದೆಯಾದ ಹಿರಿಮೆ ಇದೆ ಹಾಗೂ ಸುಮಾರು 2 ಸಾವಿರ ವರ್ಷಗಳ ಇತಿಹಾಸ ಇರುವುದನ್ನು ಅರಿತು ಅವರು ಮಾತನಾಡಬೇಕಿತ್ತು. ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾತನಾಡಿರುವುದು ಖಂಡನಾರ್ಹವಾಗಿದ್ದು, ಈ ಕೂಡಲೇ ಕನ್ನಡಿಗರ ಬಳಿ ಕ್ಷಮೆಯಾಚಿಸಬೇಕೆಂದರು.
ಸಂಘಟನೆಯ ತಾಲೂಕು ಮಹಿಳಾಧ್ಯಕ್ಷೆ ನಾಗಮ್ಮ, ಮುಖಂಡರಾದ ಗೊಲ್ಲರದೊಡ್ಡಿ ರಾಜು, ಚಿಕ್ಕವೆಂಕಟಯ್ಯ, ಸುಧಾ, ನಾರಾಯಣಸ್ವಾಮಿ, ಸಾವಿತ್ರಮ್ಮ, ಹೇಮಾವತಿ, ಸಂಜಾನಾ ಸೇರಿದಂತೆ ಇತರರು ಇದ್ದರು.