ಜಿಲ್ಲೆ

ಸಿಎಂ ವಿರುದ್ಧ ಪ್ರಾಷಿಕ್ಯೂಷನ್‌ಗೆ ಅನುಮತಿ: ಜೆಡಿಎಸ್, ಬಿಜೆಪಿ ವಿರುದ್ಧ ಶೋಷಿತ ಸಮುದಾಯದ ಮಹಾಒಕ್ಕೂಟ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಬದುಕಿಗೆ ಕಪ್ಪುಚುಕ್ಕೆ ತಂದು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಕಾವೇರಿ ಉದ್ಯಾನದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ಕಾರ್ಯಕರ್ತರು, ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ವಿಚಾರವನ್ನು ನೆಪವಾಗಿಸಿಕೊಂಡು ಬಿಜೆಪಿ ಮತ್ತು ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರಿಶುದ್ಧ ರಾಜಕಾರಣಕ್ಕೆ ಕಪ್ಪು ಮಸಿ ಬಳಿಯಲು ಮುಂದಾಗಿದೆ ಎಂದು ಆರೋಪಿಸಿದರು.

ರಾಜ್ಯಪಾಲರು ನೀಡಿದ್ದ ಪ್ರಾಷಿಕ್ಯೂಷನ್ ಆದೇಶದ ವಿರುದ್ಧ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 218 ಬಿಎನ್‌ಎಸ್‌ಎಎಸ್ ಅನ್ವಯ ರಾಜ್ಯಪಾಲರು ನೀಡಿದ್ದ ಅಭಿಯೋಜನಾ ಅನುಮತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವುದು ಕಾನೂನು ಹೋರಾಟದಲ್ಲಿ ಸಿಕ್ಕಿರುವ ಮೊದಲ ಜಯವಾಗಿದೆ. ಸಲ್ಲಿಕೆಯಾಗಿರುವ ದೂರಿನಲ್ಲಿ ಸೆಕ್ಷನ್ 218 ಬಿಎನ್‌ಎಸ್‌ಎಎಸ್, 17 ಎ ಮತ್ತು 19 ಪಿಸಿ ಕಾಯ್ದೆ ಪ್ರಕಾರ ತನಿಖೆ ಹಾಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದರು. ಆದರೆ, ರಾಜ್ಯಪಾಲರು 19 ಪಿಸಿ ಕಾಯ್ದೆ ಅನ್ವಯ ಅನುಮತಿ ನಿರಾಕರಿಸಿದರು. ಬದಲಿಗೆ ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದೀಗ ನ್ಯಾಯಾಲಯ ರಾಜ್ಯಪಾಲರ ಅನುಮತಿಗೆ ಮನ್ನಣೆ ನೀಡಿಲ್ಲ. ಇದಲ್ಲದೆ ಮುಂದಿನ ದಿನಗಳಲ್ಲಿ 17ಎ ಅನ್ವಯ ನೀಡಲಾಗಿರುವ ಅನುಮತಿ ಕೂಡ ರದ್ದಾಗಲಿದೆ. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮುಕ್ತರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹೈಕಮಾಂಡ್, ಕಾರ್ಯಕರ್ತರು ಹಾಗೂ ಶಾಸಕರು ಸಿದ್ದರಾಮಯ್ಯ ಪರ ಪ್ರಬಲವಾಗಿ ನಿಂತಿದ್ದಾರೆ. ಮಾತ್ರವಲ್ಲದೆ ಬಿಜೆಪಿ, ಜೆಡಿಎಸ್ ನಾಯಕರ ಸೇಡಿನ ರಾಜಕೀಯದ ವಿರುದ್ಧ ಹೋರಾಟ ಮುಂದುವರಿಯಲಿದೆ. ಸಿದ್ದರಾಮಯ್ಯ ಬಡವರ ಪರ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ರಾಜಕೀಯ ಪ್ರತಿಕಾರಕ್ಕೆ ಮುಂದಾಗಿದ್ದಾರೆ. ಮುಡಾ ಪ್ರಕರಣ ನೆಪವಾಗಿಸಿಕೊಂಡು ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಜತೆಗೆ ರಾಜಭವನ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ. ಇವರ ಷಡ್ಯಂತ್ರ ಫಲಿಸುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ವಿಜಯಲಕ್ಷ್ಮೀ ರಘುನಂದನ್, ಕೆ.ಎಚ್.ನಾಗರಾಜು, ಎಂ.ಎಲ್.ಸುರೇಶ್, ಎಲ್.ಸಂದೇಶ್, ಗುರುಕುಮಾರ್ ಇತರರಿದ್ದರು.