ಮೈಸೂರು: ರಾಜ್ಯದ ಎಲ್ಲ ಸರ್ಕಾರಿ ಹುದ್ದೆಗಳಿಗೆ 371ಜೆ ಮೀಸಲಾತಿಯನ್ನು ಅನ್ವಯಿಸುವ ಮೂಲಕ ಕರ್ನಾಟಕ ಇತರ ಪ್ರದೇಶಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಹಸಿರು ಪ್ರತಿಷ್ಠಾನದ ವತಿಯಿಂದ ಜೂ.1ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ.
ಸಂವಿಧಾನದ ತಿದ್ದುಪಡಿ 371ಜೆನಲ್ಲಿ ರಾಜ್ಯಮಟ್ಟದ ಹುದ್ದೆಗಳಿಗೆ ಹೈದರಾಬಾದ್ ಕರ್ನಾಟಕ ಭಾಗದ ಮೀಸಲಾತಿ ರೂಪಿಸಲು ಅವಕಾಶವಿಲ್ಲ. ಆದಾಗ್ಯೂ ರಾಜ್ಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಹೈದರಾಬಾದ್ ಕೋಟಾವನ್ನು ನಿಗದಿಪಡಿಸಿರುವ ಆದೇಶ ಹೊರಡಿಸಲಾಗಿದ್ದು, ಇದು ಅವೈಜ್ಞಾನಿಕವಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂವಿಧಾನಾತ್ಮಕವಾಗಿ ಮತ್ತು ಇತರ ಹಕ್ಕುಗಳಿಗೆ ತೊಂದರೆಯಾಗದಂತೆ ನಿಯಮ ರೂಪಿಸಬೇಕಾಗುತ್ತದೆ. ಆದರೆ, ಹೈದರಾಬಾದ್ ಕರ್ನಾಟಕ ಮೀಸಲಾತಿ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವಾಗ ಸಂವಿಧಾನದ 98ನೇ ತಿದ್ದುಪಡಿ ವಿರುದ್ಧವಾಗಿ ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ ಎಂದೂ ದೂರಿದರು.
ಹೈದರಾಬಾದ್ ಕೋಟಾವನ್ನು ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ವ್ಯಾಪ್ತಿಗೆ ಬಾರದ ಬಿಡಿಎ, ಬಿಬಿಎಂಪಿ ಸೇರಿದಂತೆ ಬೆಂಗಳೂರಿನಲ್ಲಿರುವ ಇತರ ಸರ್ಕಾರಿ ಕಚೇರಿಗಳಲ್ಲೂ ಹೈದರಾಬಾದ್-ಕರ್ನಾಟಕ ಕೋಟಾವನ್ನು ನಿಗದಿಪಡಿಸಲಾಗಿದೆ. ಇದ್ದರಿಂದ ಹೈದರಾಬಾದ್ ಕರ್ನಾಟಕ ನೌಕರರನ್ನು ರಾಜ್ಯ ಮಟ್ಟ ಎಲ್ಲ ಸರ್ಕಾರಿ ಹುದ್ದೆಗಳಿಗೂ ಪರಿಗಣಿಸಲಾಗುತ್ತಿದೆ. ಇದರಿಂದ ಇತರ ಭಾಗದವರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಹೈದರಾಬಾದ್ ಕೋಟಾವನ್ನು ನಿಗದಿಪಡಿಸಿರುವ ಆದೇಶದಿಂದ ಕರ್ನಾಟಕದ ಇತರ ಭಾಗದಲ್ಲಿರುವ ಅಧಿಕಾರಿಗಳಿಗೆ ಬಡ್ತಿ ಸಿಗುತ್ತಿಲ್ಲ. ರಾಜ್ಯದ ಮುಖ್ಯಕಾರ್ಯದರ್ಶಿಯ ಎಡವಟ್ಟಿನಿಂದ ಈ ರೀತಿ ಅನುಷ್ಠಾನವಾಗಿದೆ. ಅಲ್ಲಿರುವವರಿಗೆ ಇಲ್ಲಿ ಕೆಲಸ ನೀಡುವ ಬದಲು ಅಲ್ಲಿ ಕೈಗಾರಿಕೆಗಳನ್ನು ಸೃಷ್ಟಿಸಿ ಉದ್ಯೋಗ ನೀಡಬೇಕು ಎಂದು ತಿಳಿಸಿದರು.
ಮುಖಂಡರಾದ ಲಕ್ಷ್ಮೀಶ್ರೀನಿವಾಸ್, ಮಂಜುನಾಥ್, ವಿಜೇಂದ್ರ, ಎಚ್.ಎಲ್.ಯಮುನಾ, ಕೆ.ಸಿ.ಶಿವರಾಮ್, ಮಂಜುನಾಥ ರೆಡ್ಡಿ ಇನ್ನಿತರರಿದ್ದರು.