ಜಿಲ್ಲೆ

ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಹೋರಾಟ

ಪ್ರಸಿನ್ ಕೆ.ಆರ್

ಹಾಸನ: ತಾಲೂಕಿನ ಹೆಚ್ಚುವರಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಶಿಕ್ಷಕರು ನಗರದ ಬಿಇಒ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಇಲಾಖೆ ವಿರುದ್ಧ ಶಿಕ್ಷಕರು ಘೋಷಣೆ ಕೂಗುತ್ತಾ ತಮ್ಮ ಅಸಮಾಧಾನ, ಆಕ್ರೋಶ ಹೊರಹಾಕಿದರು. ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇಲಾಖೆ ತೆಗೆದುಕೊಂಡ ನಿರ್ಧಾರವು ಶಿಕ್ಷಕರ ಜೀವನದಲ್ಲಿ ಅಶಾಂತಿ ಉಂಟು ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕ ಜಯರಾಂ ಮಾತನಾಡಿ, ತಾಲೂಕಿನಲ್ಲಿ ನೂರಾರು ಹೆಚ್ಚುವರಿ ಶಿಕ್ಷಕರಿದ್ದಾರೆ. ಇನ್ನೂ 300ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಹುದ್ದೆಗಳನ್ನು ರದ್ದು ಮಾಡಲಾಗಿದೆ. ಇದು ನಮಗೆ ಬಹಳ ಅನ್ಯಾಯ ಆಗಿದೆ. ಮಹಿಳಾ ಶಿಕ್ಷಕರಿಗೆ ಅನುಕೂಲವಾಗುವಂತೆ ಹುದ್ದೆಗಳನ್ನು ಸ್ಥಳೀಯವಾಗಿ ನೀಡಿದರೆ ಎಲ್ಲರಿಗೂ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ನಮ್ಮನ್ನು ಹೊರ ತಾಲೂಕಿಗೆ ಕಳುಹಿಸಿದರೆ ಕುಟುಂಬ ಹಾಗೂ ಮಕ್ಕಳ ಶಿಕ್ಷಣದ ವಿಷಯದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಸ್ಯೆಗೆ ಬಿಇಒ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಎಲ್ಲ ಹೆಚ್ಚುವರಿ ಶಿಕ್ಷಕರಿಗೂ ಹಾಸನ ತಾಲೂಕಿನಲ್ಲಿಯೇ ಹುದ್ದೆ ನೀಡಬೇಕು. ಇಲ್ಲದಿದ್ದರೆ ನಾವು ಕೌನ್ಸೆಲಿಂಗ್‌ಗೆ ಹಾಜರಾಗದೆ ಬಹಿಷ್ಕಾರ ಮಾಡುತ್ತೇವೆ. ಇದರ ಹೊಣೆ ಇಲಾಖೆಯದ್ದಾಗಿದೆ. ಮುಂದೆ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೋ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಹಿರಿಯ ಶಿಕ್ಷಕ ಅಣ್ಣೇಗೌಡ ಮಾತನಾಡಿ, 50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ಬೇರೆಡೆಗೆ ವರ್ಗ ಮಾಡುವ ಇಲಾಖೆ ನಿರ್ಧಾರ ತುಂಬ ಅನ್ಯಾಯ. ನಾವು ವಯಸ್ಸಾದವರು, ಮಕ್ಕಳು, ಕುಟುಂಬ ಇದೆ. ಇಂತಹ ಸಂದರ್ಭದಲ್ಲಿ ದೂರದೂರಿಗೆ ಕಳುಹಿಸುವುದು ಅಸಮಂಜಸ. ಈ ತಾಲೂಕಿನಲ್ಲಿಯೇ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಚೈ ಮಂಜೇಗೌಡ, ಶಿಕ್ಷಕರ ಅಹವಾಲು ಆಲಿಸಿ ಮಾತನಾಡಿ, ನಿಮ್ಮ ಬೇಡಿಕೆ ನ್ಯಾಯಸಮ್ಮತವಾಗಿದೆ. ಈ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಶಿಕ್ಷಕರಾದ ಪರಮೇಶ್, ಕಲ್ಲಹಳ್ಳಿ ಹರೀಶ್ ಮೊದಲಾದವರಿದ್ದರು.