ಜಿಲ್ಲೆ

ಸಚಿವ, ಶಾಸಕರ ವೇತನ, ಭತ್ಯೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಮೈಸೂರು: ಯಾವುದೇ ಚರ್ಚೆ ಇಲ್ಲದೆ ಸಚಿವ, ಶಾಸಕರ ವೇತನ ಮತ್ತು ಭತ್ಯೆ ಹೆಚ್ಚಳ ಮಾಡುವ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕಾರ ಮಾಡಿರುವ ಕ್ರಮವನ್ನು ವಿರೋಧಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಪುರಭವನದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ ನಡೆಸಿದ ಕಾರ್ಯಕರ್ತರು, ಬೆಲೆ ಏರಿಕೆ, ಅಭಿವೃದ್ಧಿಗೆ ಹಣವಿಲ್ಲ ಎನ್ನುವ ಸಮಯದಲ್ಲಿ ಜನರ ಹಿತ ಮರೆತು ದುಪ್ಪಟ್ಟು ವೇತನ ಏರಿಕೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ವಿವಿಧ ರಂಗಗಳ ಕಾರ್ಮಿಕರ ಕನಿಷ್ಠ ವೇತನವನ್ನು ಕಳೆದ 7 ವರ್ಷಗಳಿಂದ ಏರಿಕೆ ಮಾಡಿಲ್ಲ. ರೈತರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಪಡಿಸಿಲ್ಲ. ಆದರೆ ತಮ್ಮ ವೇತನವನ್ನು ಹೆಚ್ಚು ಚರ್ಚೆಯೇ ಇಲ್ಲದೆ ಏರಿಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು ಮುಂತಾದ ಅಗತ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು, ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಹಣಕಾಸಿನ ಕೊರತೆಯ ಕಾರಣ ನೀಡಲಾಗುತ್ತದೆ. ದಿನನಿತ್ಯ ದುಡಿಯುವ ಆಶಾ, ಅಂಗನವಾಡಿ, ಬಿಸಿಯೂಟ ಮೊದಲಾದ ಸ್ಕೀಂ ನೌಕರರಿಗೆ ಪುಡಿಗಾಸಿನ ಸಂಬಳವನ್ನಷ್ಟೇ ನೀಡಲಾಗುತ್ತಿದೆ. ಆದರೆ ನಮ್ಮ ‘ಜನಸೇವಕರು’ ಯಾವುದೇ ನಾಚಿಕೆ, ಅಂಜಿಕೆ ಇಲ್ಲದೆ ತಮ್ಮ ವೇತನಗಳನ್ನು ತಾವೇ ಹೆಚ್ಚಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಯಿಟಿ ಮೊತ್ತ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂಬ ಕಾರಣ ನೀಡಿ ಪ್ರತಿ ಯೂನಿಟ್‌ಗೆ ಪ್ರತಿ ವರ್ಷ 35 ಪೈಸೆಯಂತೆ ಮುಂದಿನ ಮೂರು ವರ್ಷಗಳಿಗೆ ದರ ಏರಿಕೆ ಮಾಡಲಾಗಿದೆ. ಇನ್ನೊಂದೆಡೆ ಬಹುತೇಕ ಕೋಟ್ಯಧೀಶರಾದ ಶಾಸಕರ, ಸಚಿವರ ವೇತನ ಮತ್ತು ಭತ್ಯೆಗಳನ್ನು ದುಪ್ಪಟ್ಟು ಮಾಡಲಾಗಿದೆ ಎಂದು ಟೀಕಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನ ಸಭೆ ಸದಸ್ಯರು ರಾಜ್ಯದ ಜನಸಾಮಾನ್ಯರ ಹಿತ ಕಾಪಾಡಲು ಅವರ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೆಂಬುದು ಆಶಯವಾಗಿದೆ. ಆದರೆ ಅವರು ತಮ್ಮ ಸಂವಿಧಾನ ದತ್ತ ಅಧಿಕಾರವನ್ನು ಸ್ವಹಿತಾಸಕ್ತಿಗಾಗಿ ಬಳಸುತ್ತಿರುವುದು ಖಂಡನೀಯ ಎಂದರು.

ಜನರ ತೆರಿಗೆ ಹಣವನ್ನು ಜನ ಕಲ್ಯಾಣಕ್ಕೆ ಬಳಸಲು ಬೇಕಾದ ನೀತಿಗಳನ್ನು ರೂಪಿಸಬೇಕಾದ ಸಚಿವರು, ಶಾಸಕರು ಯಾವುದೇ ಪಕ್ಷಭೇವಿಲ್ಲದೆ ಸರ್ವಾನುಮತದಿಂದ ತಮ್ಮ ವೇತನಗಳನ್ನು ದುಪ್ಪಟ್ಟು ಮಾಡಿಕೊಂಡಿರುವುದು ಕ್ರೂರ ಹಾಸ್ಯವಲ್ಲದೆ ಇನ್ನೇನೂ ಅಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಈ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಹೊಂದಿಲ್ಲ ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕು. ಇಂಥ ವಿಲಾಸ, ದುಂದುವೆಚ್ಚವನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಈಗಾಗಲೇ ಬೆಲೆ ಏರಿಕೆಯ ಸುಳಿಗೆ ಸಿಲುಕಿರುವ ಜನರಿಗೆ ಇನ್ನೊಂದು ಆಘಾತ ನೀಡುವಂತೆ ವಿದ್ಯುತ್ ದರ ಏರಿಸಲಾಗಿದೆ. ಸಣ್ಣ ಅಂಗಡಿ, ಹೋಟೆಲ್, ಉದ್ದಿಮೆಗಳು ಬೆಲೆ ಏರಿಕೆ ಹೊರೆಯನ್ನು ಅಂತಿಮವಾಗಿ ಸಾಮಾನ್ಯ ಗ್ರಾಹಕರ ಮೇಲೆ ವರ್ಗಾಯಿಸಬೇಕಾಗುತ್ತದೆ. ವಿದ್ಯುತ್ ಕಂಪನಿಗಳ ಕೋಟಿಗಟ್ಟಲೆ ಬಾಕಿ, ಭ್ರಷ್ಟಾಚಾರ, ದುಂದುವೆಚ್ಚಗಳಂತಹ ಸಮಸ್ಯೆಗಳನ್ನು ಬಗೆಹರಿಸದೆ ಪ್ರತಿಬಾರಿ ದರ ಏರಿಕೆ ಮಾಡಿರುವುದು ಅಸಮರ್ಥನೀಯ. ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಇದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ಎಸ್‌ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಶೇಖರ ಮೇಟಿ, ಪಿ.ಎಸ್.ಸಂಧ್ಯಾ, ಜಿ.ಎಸ್.ಸೀಮಾ , ಹರೀಶ್, ಸುನೀಲ್, ಸುಮಾ, ಚಂದ್ರಕಲಾ ಇತರರು ಇದ್ದರು.