ಹುಬ್ಬಳ್ಳಿ: ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಸಕಾಲಕ್ಕೆ ಟಿಸಿ ಒದಗಿಸದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವಿರುದ್ಧ ಧಾರವಾಡ ಜಿಲ್ಲೆಯ ಸಾವಿರಾರು ರೈತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ ಎಪಿಎಂಸಿ ಗೇಟ್ ಬಳಿ ಜಮಾಯಿಸಿದ ಜಿಲ್ಲೆಯ ಕಲಘಟಗಿ, ಧಾರವಾಡ, ಹುಬ್ಬಳ್ಳಿ ತಾಲೂಕಿನ ರೈತರು ನವನಗರದ ಹೆಸ್ಕಾಂ ಕಚೇರಿ ವರೆಗೂ ಮೆರವಣಿಗೆ ನಡೆಸಿದರು.
ರಾಜ್ಯ ಸರ್ಕಾರ ರೈತರಿಗೆ ವಿದ್ಯುತ್ ಪೂರೈಕೆ ಮಾಡದೇ ಅನ್ಯಾಯ ಮಾಡುತ್ತಿದೆ. ಬೇಸಿಗೆಯಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ಹೆಣಗಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾರಿಯುದ್ದಕ್ಕೂ ಸಮರ್ಪಕ ವಿದ್ಯುತ್ ಕೊಡದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು.
ಮಾಜಿ ಎಂಎಲ್ ಸಿ ನಾಗರಾಜ ಛಬ್ಬಿ, ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಇತರರು ನೇತೃತ್ವ ವಹಿಸಿದ್ದರು.