ಜಿಲ್ಲೆ

ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ಹೋರಾಟದ ಕಿಚ್ಚು

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ರಾಮನಗರಕ್ಕೆ ಹೇಮಾವತಿ ನೀರು ಕೊಂಡೊಯ್ಯುವ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯನ್ನು ಇನ್ನೂ 3 ದಿನದೊಳಗೆ ಸ್ಥಗಿತಗೊಳಿಸುವಂತೆ ಮಾಜಿ ಸಚಿವ ಸೊಗಡುಶಿವಣ್ಣ ನೇತೃತ್ವದಲ್ಲಿ ಪಕ್ಷಾತೀತವಾಗಿ ಕರೆ ಕೊಡಲಾಯಿತು. ರಾಜ್ಯ ಸರ್ಕಾರ ಒಂದುವೇಳೆ ಕಾಮಗಾರಿ ಮುಂದುವರೆಸಿದ್ದೇ ಆದಲ್ಲಿ ಜಿಲ್ಲೆಯ ಜನರ, ರೈತರ ಹಿತರಕ್ಷಣೆಗೆ ಜೈಲಿಗೆ ಹೋಗಲು ಸಿದ್ಧ ಎಂದು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೊಗಡು, ರಾಮನಗರ ಜಿಲ್ಲೆಯ ತಾಲೂಕುಗಳಿಗೆ ಎತ್ತಿನಹೊಳೆ, ಶಿಂಷಾನದಿ, ಕಾವೇರಿ ನದಿ ನೀರನ್ನು ಒದಗಿಸಬಹುದು. ಎಕ್ಸ್‌ಪ್ರೆಸ್ ಕೆನಾಲ್ ನಿರ್ಮಿಸಿ ಹೇಮಾವತಿ ನಾಲೆಯ ನೀರನ್ನು ಆಶ್ರಯಿಸಿರುವ ತುಮಕೂರು ಜಿಲ್ಲೆಯ ತಾಲೂಕುಗಳಿಗೆ ಅನ್ಯಾಯ ಮಾಡುತ್ತಿರುವುದು ಅಮಾನವೀಯ ಸಂಕೇತ. ಜಿಲ್ಲೆಗೆ ಹಂಚಿಕೆ ಆಗಿರುವ ನೀರನ್ನು ಕೊಂಡೊಯ್ಯುವ ಹುನ್ನಾರ ನಡೆಸಿದ್ದು ನಮಗೆ ವಿಷ ಕೊಡಲು ಹೊರಟಿದ್ದೀರಾ ಎಂದರು.

ಹೇಮಾವತಿ ಯೋಜನೆಯ ಕೊನೆಭಾಗವಾದ ಕುಣಿಗಲ್‌ಗೆ ಸರಾಗವಾಗಿ ನೀರು ಹರಿಸಲು ತುಮಕೂರು ಹೇಮಾವತಿ ಶಾಖಾ ನಾಲೆ ಆಧುನೀಕರಣಕ್ಕೆ ಈ ಹಿಂದಿನ ಸರ್ಕಾರ 600 ಕೋ.ರೂ., ವೆಚ್ಚ ಮಾಡಿದೆ. ಹಾಗಾಗಿ, ನೈಸರ್ಗಿಕವಾಗಿ ನೀರು ಹರಿಸಲು ನಮಗೆ ಯಾವುದೇ ವಿರೋಧ ಇಲ್ಲ. ಆದರೆ, ಅವೈಜ್ಞಾನಿಕ,ಬಹಳಷ್ಟು ಅಡ್ಡಪರಿಣಾಮಗಳಿಗೆ ಕಾರಣೀಭೂತವಾಗಿರುವ ಜತೆಗೆ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರತೀಕವಾಗಿರುವ ಪೈಪ್‌ಲೈನ್ ಲಿಂಕ್ ಕೆನಾಲ್ ಯೋಜನೆಯನ್ನು ತತ್‌ಕ್ಷಣ ಕೈಬಿಡಬೇಕು. ಇಲ್ಲವಾದಲ್ಲಿ ಗುಬ್ಬಿ ತಾಲೂಕಿನ ಡಿ.ರಾಂಪುರ ಬಳಿ ಆರಂಭಿಸಿರುವ ಕಾಮಗಾರಿಯನ್ನು ಸಹಸ್ರಾರು ರೈತರ ಜತೆ ಖುದ್ದು ತಡೆಯುತ್ತೇವೆ. ಇದು ಪಕ್ಷಾತೀತ, ಜಾತ್ಯಾತೀತವಾದ ಹೋರಾಟ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಚ್.ನಿಂಗಪ್ಪ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣಗೌಡ, ರಾಜ್ಯ ಪ್ರಧಾನಕಾರ್ಯದರ್ಶಿ ಟಿ.ಪುಟ್ಟಣ್ಣ, ತಿಪಟೂರು ಎಪಿಎಂಸಿ ಮಾಜಿ ಸದಸ್ಯ ಎಂ.ಪಿ.ಪ್ರಸನ್ನಕುಮಾರ್, ಸಾಮಾಜಿಕ ಹೋರಾಟಗಾರ ಪ್ರಭಾಕರ್ ಮತ್ತಿತರರು ಹಾಜರಿದ್ದರು.

ಕೆಡಿಪಿ ನಿರ್ಣಯಕ್ಕೆ ಕಿಮ್ಮತ್ತಿಲ್ಲ ! ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲೇ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಕೈಬಿಡಲು ಒಕ್ಕೊರಲ ನಿರ್ಣಯಕೈಗೊಳ್ಳಲಾಗಿತ್ತು. ಈಗ ಕಾಮಗಾರಿ ಆರಂಭಿಸಲಾಗಿದ್ದು ಕೆಡಿಪಿ ನಿರ್ಣಯಕ್ಕೆ ಕಿಮ್ಮತ್ತಿಲ್ಲವಾಗಿದೆ. ನಾವೀಗ ಸ್ವಲ್ಪ ಯಾಮಾರಿ ಬಿಟ್ಟರೆ ಜಿಲ್ಲೆಯ ಜನಕ್ಕೆ ಅನ್ಯಾಯ ಮಾಡಿದಂತಾಗಲಿದೆ. ಜಿಲ್ಲೆಗೆ ಮರಣಶಾಸನವಾಗಲಿರುವ ಈ ಯೋಜನೆ ತಡೆಯುವುದು ಕಾಂಗ್ರೆಸ್ ಸಚಿವದ್ವಯರ ಜವಾಬ್ದಾರಿ ಕೂಡ. ಎಕ್ಸ್‌ಪ್ರೆಸ್ ಕೆನಾಲ್ ನಿರ್ಮಾಣವಾದರೆ ಗುಬ್ಬಿ ತಾಲೂಕಿಗೆ ಒಂದು ಹನಿ ನೀರು ಹೋಗೋಲ್ಲ. ಪಕ್ಷ ಪಕ್ಕಕ್ಕಿಡಿ. ಹೋರಾಟಕ್ಕೆ ಕೈಜೋಡಿಸಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್‌ರನ್ನು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಸಿದರು. ತುಮಕೂರು ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿ ರಾಮನಗರ ಜಿಲ್ಲೆಗೆ ಕೊಂಡೊಯ್ಯುವುದು ಸರಿಯಲ್ಲ. ರಾಜಕೀಯ ಹಸ್ತಕ್ಷೇಪ ಬೇಡ. ಎಲ್ಲರೂ ರೈತರೆ. ತುಮಕೂರು ಜಿಲ್ಲೆಯಲ್ಲೇ ಜನ, ಜಾನುವಾರುಗಳಿಗೆ ಕುಡಿಯಲಿಕ್ಕೆ ನೀರಿಲ್ಲ. ಇನ್ನೂ ಈ ನೀರನ್ನು ಕೊಂಡೊಯ್ಯುವುದು ಜನರ ನಡುವೆ ದ್ವೇಷಕ್ಕೆ ಕಾರಣವಾಗಲಿದೆ. ಇದು ಪಕ್ಷಾತೀತ ಹೋರಾಟವಾಗಿದ್ದು ಜಿಲ್ಲೆಯ ಹಿತರಕ್ಷಣೆಗಾಗಿ ಎಲ್ಲರೂ ಕೈಜೋಡಿಸಬೇಕು. ಲಕ್ಷ್ಮೀನಾರಾಯಣಗೌಡ ಅಧ್ಯಕ್ಷ, ರಾಜ್ಯ ರೈತ ಸಂಘ ಹೊಸ ಯೋಜನೆ ಕೈಗೆತ್ತಿಕೊಳ್ಳಬೇಕಾದರೆ ನೀರಿನ ಲಭ್ಯತೆ ನೋಡಿಕೊಂಡು ಹೆಜ್ಜೆ ಇಡಬೇಕು. ಎಕ್ಸ್‌ಪ್ರೆಸ್ ಕೆನಾಲ್‌ನಿಂದ ನಮ್ಮ ಜಿಲ್ಲೆಗು ಅನ್ಯಾಯವಾಗಲಿದೆ ಮತ್ತೊಂದೆಡೆ ಅವರಿಗು ನೀರು ಸಿಗುವುದಿಲ್ಲ. ಕೆಡಿಪಿ ಸಭೆಯಲ್ಲಿ ಮಹತ್ವಪೂರ್ಣ ನಿರ್ಣಯ ಕೈಗೊಂಡಿದ್ದರು ಯಾವುದೇ ಬೆಲೆ ಇಲ್ಲವಾಗಿದೆ. ಜಿಲ್ಲೆಗೆ ತಾರತಮ್ಯ, ಅನ್ಯಾಯವಾಗಲಿದೆ. ನಮ್ಮ ಜಿಲ್ಲೆಗೆ ಹಂಚಿಕೆ ಮಾಡಿರುವ ನೀರನ್ನು ರಾಮನಗರ ಜಿಲ್ಲೆಗೆ ಯಾವುದೇ ಕಾರಣಕ್ಕು ಬಿಡುವುದಿಲ್ಲ. ನಮ್ಮ ಹೋರಾಟಕ್ಕೆ ಪಕ್ಷ, ಜಾತಿ ಮುಖ್ಯವಲ್ಲ. ಎಚ್.ನಿಂಗಪ್ಪ ಮಾಜಿ ಶಾಸಕ ಹೇಮಾವತಿ ನಾಲಾ ಆಧುನೀಕರಣ ಮೂಲಕ ಯೋಜನೆ ಕೊನೆಭಾಗವಾದ ಕುಣಿಗಲ್‌ಗೆ ಸರಾಗವಾಗಿ ನೀರು ಹರಿಸಲು ಕ್ರಮಕೈಗೊಂಡಿದ್ದರು ವಾಮಮಾರ್ಗದಿಂದ ಹೇಮೆ ನೀರನ್ನು ರಾಮನಗರ ಜಿಲ್ಲೆಗೆ ಕೊಂಡೊಯ್ಯಲು ಹುನ್ನಾರ ನಡೆಸಲಾಗಿದೆ. ಜನ ಶಕ್ತಿ ಮುಂದೆ ಯಾವ ಬಂಡೆನು ತಡೆಯೋಲ್ಲ. ಲಿಂಕ್ ಕೆನಾಲ್ ಅನ್ನು ಮುಚ್ಚಿಸುತ್ತೇವೆ. ಬೇಕಾದರೆ ನೈಸರ್ಗಿಕವಾಗಿ ನೀರು ತೆಗೆದುಕೊಂಡು ಹೋಗಲಿ. ಪೈಪ್‌ಲೈನ್‌ನಲ್ಲಿ ಹನಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಉಗ್ರಹೋರಾಟ ಮಾಡುತ್ತೇವೆ. ಎಸ್.ಡಿ.ದಿಲೀಪ್ ಕುಮಾರ್ ಬಿಜೆಪಿ ಮುಖಂಡ ನಮ್ಮ ನೀರು, ನಮ್ಮ ಹಕ್ಕು. ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಗೆ ಹೇಮೆ ನೀರು ಹರಿಸುವ ಹುನ್ನಾರ ತಡೆಯುವ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ಮಠಾಧೀಶರ, ರೈತಸಂಘಟನೆಗಳ ಬೆಂಬಲ ಪಡೆದಿದ್ದೇವೆ. ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಲು 3 ದಿನ ಗಡುವು ನೀಡಲಾಗಿದೆ. ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿದ್ದರೆ ಅನಿವಾರ್ಯವಾಗಿ ನಾವೇ ಖುದ್ದು ತಡೆಯುತ್ತೇವೆ. ಪೊಲೀಸ್ ದೊಡ್ಡ ಪಡೆಯನ್ನು ಹಾಕಿದರೂ ನಮ್ಮ ಹೋರಾಟ ತಡೆಯಲು ಸಾಧ್ಯವಿಲ್ಲ. ಸೊಗಡುಶಿವಣ್ಣ ಮಾಜಿ ಸಚಿವ