ಜಿಲ್ಲೆ

ತಡಗವಾಡಿ ಗ್ರಾಪಂ ಅಧ್ಯಕ್ಷರನ್ನು ವಜಾಗೊಳಿಸಿ: ಜಿಪಂ ಕಚೇರಿ ಎದುರು ಸದಸ್ಯರು, ಗ್ರಾಮಸ್ಥರ ಪ್ರತಿಭಟನೆ

ಮಂಡ್ಯ: ಅಧಿಕಾರ ದುರುಪಯೋಗ, ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವ ಶ್ರೀರಂಗಪಟ್ಟಣ ತಾಲೂಕು ತಡಗವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸದಸ್ಯರು ಹಾಗೂ ಗ್ರಾಮಸ್ಥರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಧ್ಯಕ್ಷ ಜಿ.ಎನ್.ಮಧು ಅವರು ಪಿಡಿಒ, ಕಾರ್ಯದರ್ಶಿ ಸೇರಿದಂತೆ ಎಲ್ಲ ನೌಕರ ವರ್ಗಕ್ಕೂ ಅನಾವಶ್ಯಕವಾಗಿ ಒತ್ತಡ ಹೇರುತ್ತಿದ್ದು, ಸ್ವತಃ ತಾವೇ ಎಲ್ಲ ನೌಕರರಿಗೂ ನೋಟೀಸ್ ನೀಡುವ ಮೂಲಕ ಗ್ರಾಪಂನಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. 15ನೇ ಹಣಕಾಸು ಯೋಜನೆಯ ಅನುದಾನಕ್ಕೆ ಕ್ರಿಯಾ ಯೋಜನೆ ಮಾಡಿಕೊಳ್ಳುತ್ತೇನೆಂದು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.
ಅಧ್ಯಕ್ಷರ ಏಕಪಕ್ಷೀಯ ನಿರ್ಧಾರಕ್ಕೆ ಸದಸ್ಯರ ಒಪ್ಪಿಗೆ ಸಿಗದ ಕಾರಣ ಅಧ್ಯಕ್ಷರೇ ತಮ್ಮಿಷ್ಟದಂತೆ ಕ್ರಿಯಾಯೋಜನೆ ತಯಾರಿಸಿಕೊಂಡು ಪಿಡಿಒ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಧ್ಯಕ್ಷರ ಕ್ರಮವಲ್ಲದ ನಿರ್ಧಾರಗಳಿಗೆ ಬೆಂಬಲ ನೀಡದಿರುವ ಉದ್ದೇಶದಿಂದ ಪಿಡಿಒ ಬಿ.ಎನ್.ತಿಲಕ್‌ಕುಮಾರ್ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅಧ್ಯಕ್ಷರ ಇಂತಹ ವರ್ತನೆಯಿಂದ ಯಾವುದೇ ಅಧಿಕಾರಿಗಳು ಸಹ ಕಾನೂನು ಪ್ರಕಾರ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅಧ್ಯಕ್ಷರ ಇಂತಹ ದುರ್ನಡತೆಯಿಂದ ಬೇಸತ್ತು ಯಾವುದೇ ಅಧಿಕಾರಿಗಳು ನಮ್ಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಲು ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ರಾಧ, ಕವಿತಾ, ಎಂ.ಪುಟ್ಟಸ್ವಾಮಿಗೌಡ, ಪೂರ್ಣಿಮಾ ಇತರರಿದ್ದರು.