ಜಿಲ್ಲೆ

ಡಿ.ಕೆ. ಶಿವಕುಮಾರ ಹೇಳಿಕೆ ಖಂಡಿಸಿ ಪ್ರತಿಭಟನೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂವಿಧಾನ ಬದಲಾವಣೆ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಡಪಾ ಮೈದಾನದಿಂದ ಜುಬಿಲಿ ವೃತ್ತವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿಮಿರ್ಸಿ ಡಿ.ಕೆ.ಶಿವಕುಮಾರ ವಿರುದ್ಧ ಘೋಷಣೆ ಕೂಗಿದರು.

ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ. ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ತೀರ್ಮಾನ ಸಂವಿಧಾನ ಬಾಹಿರವಾಗಿದ್ದು, ಸರ್ಕಾರ ವೋಟ್​ ಬ್ಯಾಂಕ್​ಗೆ ಒಂದು ಸಮುದಾಯವನ್ನು ಓಲೈಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್​ಗೆ ಸಂವಿಧಾನ ಮತ್ತು ಅಂಬೇಡ್ಕರ್​ ಬಗ್ಗೆ ಗೌರವವಿಲ್ಲ. ಸಂವಿಧಾನ ಬದಲಾವಣೆ ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ ವಿರುದ್ಧ ಕಠಿಣ ಕ್ರಮವಾಗಬೇಕು. ಕಾಂಗ್ರೆಸ್​ ನಾಯಕರು ಕೂಡಲೇ ಅವರ ರಾಜೀನಾಮೆ ಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ವಿಜಯಾನಂದ ಶಟ್ಟಿ, ಸಂಜಯ ಕಪಟಕರ, ಶಂಕರ ಶೇಳಕೆ, ಬಸವರಾಜ ಮುತ್ತಳ್ಳಿ, ಮಂಜುನಾಥ ಮಲ್ಲಿಗವಾಡ, ಮೋಹನ ರಾಮದುರ್ಗ, ಹರೀಶ ಬಿಜಾಪುರ, ಮಂಜುನಾಥ ಬಟ್ಟೆಣ್ಣವರ, ಶಂಕರಕೊಮಾರ ದೇಸಾಯಿ, ವಿಷ್ಣು ಕೊರ್ಲಹಳ್ಳಿ, ಶಕ್ತಿ ಹಿರೇಮಠ, ಪ್ರಮೋದ ಕಾರಕೂನ, ಶ್ರೀನಿವಾಸ ಕೊಟ್ಯಾನ, ಭೀಮು ಸವಣೂರ, ಚಂದ್ರಕಲಾ ಕೊಟಬಾಗಿ, ಜ್ಯೋತಿ ಪಾಟೀಲ, ಇತರರು ಇದ್ದರು.