ಹಾವೇರಿ: ಸಂವಿಧಾನ ಧಿಕ್ಕರಿಸಿ ಮುಸಲ್ಮಾನರನ್ನು ಓಲೈಸುತ್ತಿರುವ ಕಾಂಗ್ರೆಸ್ ಸರ್ಕಾರ ಗುತ್ತಿಗೆಯಲ್ಲಿ ಮೀಸಲಾತಿ ಕೊಡುತ್ತಿರುವುದು, ಸಂವಿಧಾನ ಬದಲಾವಣೆ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ ಮಾತನಾಡಿರುವುದನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
‘ಡಿಸಿಎಂ ಡಿ.ಕೆ. ಶಿವಕುಮಾರ ಅವರೇ ಯಾವುದೇ ಕಾರಣಕ್ಕೂ ಡಾ. ಅಂಬೇಡ್ಕರ್ ಅವರ ಸಂವಿಧಾನದ ಒಂದಿಂಚನ್ನೂ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನ ಬದಲಿಸಲು ಕೈ ಹಾಕಿದರೆ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಡಿಸಿಎಂ ಹೇಳಿಕೆಯಿಂದಾಗಿ ಕಾಂಗ್ರೆಸ್ ಪಕ್ಷದ ಬಂಡವಾಳ ಬಯಲಾಗಿದೆ. ಧರ್ಮಾಧಾರಿತವಾಗಿ ಮುಸಲ್ಮಾನರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಿರುವ ಕಾಂಗ್ರೆಸ್ ಪಕ್ಷದ ಷಡ್ಯಂತ್ರ ಯಶಸ್ವಿಯಾಗಲು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಅವಕಾಶ ನೀಡುವುದಿಲ್ಲ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಭ್ರಷ್ಟ ಸರ್ಕಾರ ತೊಲಗುವ ತನಕ ಎಲ್ಲರೂ ನಿರಂತರ ಹೋರಾಟ ಮಾಡಬೇಕು ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಪ್ರಮುಖರಾದ ಕೆ. ಶಿವಲಿಂಗಪ್ಪ. ಪಾಲಾಕ್ಷಗೌಡ ಪಾಟೀಲ, ಗವಿಸಿದ್ದಪ್ಪ ದ್ಯಾಮಣ್ಣವರ, ಮಂಜುನಾಥ ಓಲೇಕಾರ, ಭಾರತಿ ಜಂಬಗಿ, ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಮಂಜುನಾಥ ಗಾಣಿಗೇರ, ಮುರಿಗೆಪ್ಪ ಶೆಟ್ಟರ್, ಜಗದೀಶ ಕನವಳ್ಳಿ, ಮಂಜುನಾಥ ಮಡಿವಾಳರ, ವೀರೇಶ ಅಂಗಡಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.