ಜಿಲ್ಲೆ

ಕಾಲೇಜ್ ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ

ಭಟ್ಕಳ: ಕೆಲವು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಪದವಿ ಕಾಲೇಜಿನ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪಾಲಕರು ಶನಿವಾರ ಪ್ರತಿಭಟನ ನಡೆಸಿದರು.

ಸೆ.1 ರಿಂದ ಕವಿವಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಅದರಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 18 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಲ್ಲಿನ ಪ್ರಾಂಶುಪಾಲರು ಹಾಜರಾತಿ ಕಡಿಮೆ ಇದೆ ಎಂದು ಅವಕಾಶ ನೀಡಿಲ್ಲ. ಇದರಿಂದ ಆಕ್ರೋಶಗೊಂಡ ಪಾಲಕರು ಹಾಗೂ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯುಯುಸಿಎಂಎಸ್ ವೆಬ್‌ಸೈಟ್‌ನಲ್ಲಿ ಪರೀಕ್ಷೆ ಬರೆಯಲು ಅರ್ಹರು ಎಂದು ಹಾಲ್ ಟಿಕೆಟ್ ಕೂಡ ನೀಡಲಾಗಿದೆ. ಒಂದು ವೇಳೆ ಪರೀಕ್ಷೆ ಬರೆಯಲು ಅರ್ಹತೆ ಇಲ್ಲದಿದ್ದಲ್ಲಿ ಹಾಲ್ ಟಿಕೆಟ್ ಬರುತ್ತಿರಲಿಲ್ಲ. ಯುಯುಸಿಎಂಎಸ್ ವೆಬ್‌ಸೈಟ್‌ನಲ್ಲಿ ಪರೀಕ್ಷೆ ಬರೆಯಲು ಅರ್ಹರು ಎಂದಿದ್ದರೂ ಅವಕಾಶ ನೀಡದ ಪ್ರಾಂಶುಪಾಲರ ವರ್ತನೆಗೆ ಟೀಕೆ ವ್ಯಕ್ತವಾಯಿತು.

ಒಟ್ಟು 18 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಹೇಳಿದ್ದ ಪ್ರಾಂಶುಪಾಲರು ಅದರಲ್ಲಿ 8 ಜನರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿ ತಾರತಮ್ಯ ಮಾಡಿದ್ದಾರೆ. ಇನ್ನೂ 10 ಜನ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ, ಅವರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದರು.

ಸ್ಥಳಕ್ಕೆ ಭಟ್ಕಳ ಶಹರ ಠಾಣೆ ಪಿಎಸ್‌ಐ ಶಿವಾನಂದ ತಂಗಡಗಿ, ಎಎಸ್‌ಐ ಗೋಪಾಲ ನಾಯ್ಕ, ರಾಮಚಂದ್ರ ವೈದ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದ್ದಾರೆ. ಪರೀಕ್ಷೆ ಬರೆಯಲು ಯಾಕೆ ಅವಕಾಶ ನೀಡಿಲ್ಲ ಎಂದು ಪ್ರಾಂಶುಪಾಲರ ಬಳಿ ಲಿಖಿತವಾಗಿ ನೀಡುವಂತೆ ಸೂಚಿಸಿದ್ದಾರೆ.

ನನ್ನ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯ ಸರಿ ಇಲ್ಲ. ನನ್ನ ಮಗ ಬೇರೆ ಕಡೆ ಕೆಲಸ ಮಾಡಿ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಹೀಗಿರುವಾಗ ಅವನ ಹಾಜರಾತಿ ಸ್ವಲ್ಪ ಕಡಿಮೆ ಆಗಿದೆ. ಆದರೆ, ವಿಶ್ವವಿದ್ಯಾಲಯದವರು ಹಾಲ್ ಟಿಕೆಟ್ ಹಾಗೂ ವೆಬ್‌ಸೈಟ್‌ನಲ್ಲಿ ಅರ್ಹತೆ ಇದೆ ಎಂದಾಗಲೂ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ.> ಮಾದೇವ ನಾಯ್ಕ, ಪಾಲಕ ವಿಶ್ವವಿದ್ಯಾಲಯದ ನಿಯಮದ ಪ್ರಕಾರ ಒಂದು ವಿಷಯದಲ್ಲಿ ಹಾಜರಾತಿ ಕಡಿಮೆ ಇದ್ದರೂ ಪರೀಕ್ಷೆ ಬರೆಯಲು ಅರ್ಹತೆ ಕಳೆದುಕೊಳ್ಳುತ್ತಾರೆ. ಅದೇ ನಿಯಮವನ್ನು ನಾವು ಪಾಲಿಸಿದ್ದೇವೆ. ಅದರ ಪ್ರಕಾರ 16 ವಿದ್ಯಾರ್ಥಿಗಳ ಪರೀಕ್ಷೆ ಬರೆಯಲು ಅರ್ಹತೆ ಕಳೆದುಕೊಂಡಿದ್ದಾರೆ.>ನಾಗೇಶ ಶೆಟ್ಟಿ, ಉಪನ್ಯಾಸಕ, ಯುಯುಸಿಎಂಸಿ ಇನ್‌ಚಾರ್ಜ್