ಜಿಲ್ಲೆ

ಶುದ್ಧ ನೀರು ಸರಬರಾಜಿಗೆ ಆಗ್ರಹಿಸಿ ಪ್ರತಿಭಟನೆ

Haveri

ಬ್ಯಾಡಗಿ: ಕಳೆದೊಂದು ತಿಂಗಳಿಂದ ಕುಡಿಯುವ ನೀರಿಗೆ ಚರಂಡಿ ನೀರು ಸೇರುತ್ತಿದೆ. ಸಮಸ್ಯೆ ಪರಿಹರಿಸುವಂತೆ ತಿಳಿಸಿದರೂ ಪುರಸಭೆಯವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಇಸ್ಲಾಂಪುರ ಓಣಿ ನಿವಾಸಿಗಳು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯೆ ಜಮೀಲಾಬಿ ಹೆರಕಲ್ಲ ಮಾತನಾಡಿ, ಚರಂಡಿ ನೀರು ಮಿಶ್ರಣವಾಗುವ ಕುರಿತು ಫೆ. 19ರಂದು ಪುರಸಭೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಸ್ವತಃ ನಮ್ಮ ಮನೆಗೇ ಕೊಳೆ ನೀರು ಪೂರೈಕೆಯಾಗುತ್ತಿದ್ದು, ಜನಪ್ರತಿನಿಧಿಗಳ ಪರಿಸ್ಥಿತಿ ಹೀಗಾದ್ರೆ, ಸಾರ್ವಜನಿಕರ ಗತಿ ಏನು? ಎಂದು ಪ್ರಶ್ನಿಸಿದರು.

ನಿವಾಸಿ ರಘು ಪೂಜಾರ ಮಾತನಾಡಿ, ಪೈಪ್​ಲೈನ್​ನಲ್ಲಿನ ಡ್ಯಾಮೇಜ್ ಗುರುತಿಸಲು ಆಗುತ್ತಿಲ್ಲ ಎಂದು ಪುರಸಭೆ ಸಿಬ್ಬಂದಿ ಹೇಳುತ್ತಿದ್ದಾರೆ. ಅಧಿಕಾರಿಗಳಿಗೆ ತೋರಿಸಲು ಬಾಟಲ್​ಗಳಲ್ಲಿ ನೀರು ತುಂಬಿ ಇಟ್ಟಿದ್ದೇವೆ. ನೀರು ಸೇವನೆಯಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೂಡಲೆ ಪುರಸಭೆಯವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಕೆಲವರು ನಳಗಳಿಂದ ನೀರು ಪಡೆಯಲು ಅಲ್ಲಲ್ಲಿ ಗುಂಡಿ ತೆಗೆದಿದ್ದು, ಅಲ್ಲಿಂದ ಕೊಳೆನೀರು ಪೈಪ್​ನಲ್ಲಿ ಸೇರುತ್ತಿದೆ. ಪೈಪ್​ಲೈನ್ ಕಿತ್ತು ಹಾಕಲು ಸೂಚಿಸಲಾಗಿದೆ ಎಂದರು. ಬಳಿಕ ನಿವಾಸಿಗಳೂ ಪ್ರತಿಭಟನೆ ಹಿಂಪಡೆದರು.

ಪುರಸಭೆ ಮಾಜಿ ಸದಸ್ಯ ಎ.ಎಫ್. ಕುರಗುಂದ, ಮಹಬೂಬ್ ಚೌಕದಾರ, ಗೌಸ್ ಕಳ್ಯಾಳ, ಸದ್ದಾಂ ಹುಸೇನ, ಅತ್ತಾವುಲ್ಲಾ ಮುರಡಿಹಳ್ಳಿ, ಎಸ್.ಎಸ್. ಮುರಡಿಹಳ್ಳಿ, ಹುಸೇನಸಾಬ ಯಕಸಲಾಪುರ, ಎಸ್.ಕೆ. ರಾಜು, ಚೈತುನಬಿ ಸೌದಾಗರ, ಅಲ್ತಾಫ್ ಸೌದಾಗರ, ಪಿ.ಎ. ಬಡಿಗೇರ, ರಾಜು ಹಿತ್ತಲಮನಿ ಇದ್ದರು.