ಜಿಲ್ಲೆ

ಚಿಗರಿ ಪಥದಲ್ಲಿ ಸಂಚರಿಸಲೆತ್ನಿಸಿದವರ ಬಂಧನ, ಬಿಡುಗಡೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್ ಅವ್ಯವಸ್ಥೆ ಖಂಡಿಸಿ ಧಾರವಾಡ ಧ್ವನಿ ಸಂಘಟನೆಯಿ0ದ ಗುರುವಾರ ಹಮ್ಮಿಕೊಂಡಿದ್ದ ಧಾರವಾಡದಿಂದ ನವಲೂರು ಸೇತುವೆವರೆಗೆ ಬಿಆರ್‌ಟಿಎಸ್ ಪಥದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಪೊಲೀಸರು ಆರಂಭದಲ್ಲೇ ತಡೆಯೊಡ್ಡಿದರು.

ಧಾರವಾಡದ ಕಲಾಭವನದಿಂದ ಪ್ರತಿಭಟನೆ ಆರಂಭಿಸಿ ಬೆಕ್ ಹಾಗೂ ಕಾರುಗಳೊಂದಿಗೆ ಬಿಆರ್‌ಟಿಎಸ್ ರಸ್ತೆಯಲ್ಲಿ ನವಲೂರು ಸೇತುವೆವರೆಗೆ ಸಂಚರಿಸುವುದು ಪ್ರತಿಭಟನಾಕಾರರ ಉದ್ದೇಶವಾಗಿತ್ತು. ಆದರೆ, ಪೊಲೀಸರು ಇದಕ್ಕೆ ಅವಕಾಶ ಕೊಡದೆ ಪ್ರತಿಭಟನಾಕಾರರನ್ನು ಕಲಾಭವನದ ಮುಖ್ಯ ದ್ವಾರದಲ್ಲಿ ತಡೆದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಕರೆದೊಯ್ಯಲು ಯತ್ನಿಸಿದಾಗ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಆಗಮಿಸಿದ ಬಿಆರ್‌ಟಿಎಸ್ ಎಂಡಿ ಸಾವಿತ್ರಿ ಕಡಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರೊಂದಿಗೆ ನಡೆದ ಮಾತುಕತೆ ವಿಫಲವಾಯಿತು.

ಅಲ್ಲಿಂದ ಬಿಆರ್‌ಟಿಎಸ್ ರಸ್ತೆಗೆ ನುಗ್ಗಿದ ಪ್ರತಿಭಟನಾಕಾರರು ಚಿಗರಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಬಿಆರ್‌ಟಿಎಸ್ ತೊಲಗಲಿ ಎಂದು ಘೋಷಣೆಗಳನ್ನು ಕೂಗಿದರು. ಜ್ಯುಬಿಲಿ ವೃತ್ತದಿಂದ ನವಲೂರು ಸೇತುವೆವರೆಗೆ ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.