ಜಿಲ್ಲೆ

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಪ್ರತಿಭಟನೆ

ಆರ್.ಕೃಷ್ಣ

ಮೈಸೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಮಾಡಿ, ಅಸಂಬದ್ಧ ಪದ ಬಳಕೆ ಮಾಡಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಅಶೋಕಪುರಂ ದಲಿತ ಸಂಘಟನೆಗಳ ಸಹಯೋಗದಲ್ಲಿ ನಗರದ ಬಲ್ಲಾಳ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಗುತ್ತಿಗೆದಾರರೊಬ್ಬರ ಜತೆಗೆ ಮಾತನಾಡುವ ಭರದಲ್ಲಿ ಶಾಸಕ ಎನ್ನುವುದನ್ನು ಮರೆತು ಜಾತಿ ನಿಂದನೆ ಮತ್ತು ಅಸಂಬದ್ಧ ಪದ ಬಳಕೆ ಮಾಡಿರುವುದು ಖಂಡನೀಯ ಎಂದರು.
ದಲಿತರ ವಿರುದ್ಧ ಅವಾಚ್ಯ ಶಬ್ದ ಬಳಸಿರುವ ಅವರು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿಗೆ ನೈತಿಕತೆ ಇದ್ದರೆ ಅವರನ್ನು ಪಕ್ಷದಿಂದ ತಕ್ಷಣ ಉಚ್ಚಾಟಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ದೊಡ್ಡ ಗರಡಿ ಅಧ್ಯಕ್ಷ ಜೋಗಿ ಮಹೇಶ್, ಆದಿ ಕರ್ನಾಟಕ ಮಹಾ ಸಂಸ್ಥೆಯ ಅಧ್ಯಕ್ಷ ಸುನೀಲ್, ಕೃಷ್ಣರಾಜೇಂದ್ರ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು (ಬಸಪ್ಪ) ಮುಖಂಡರಾದ ಭಾಸ್ಕರ್, ಈಶ್ವರ್, ಮುಡಾ ಮಾಜಿ ಸದಸ್ಯ ವಿಶ್ವೇಶ್ವರಯ್ಯ, ನಾಗರಾಜು, ಪೈಲ್ವಾನ್ ಸುನೀಲ್, ಡಾ.ಸಿದ್ದಸ್ವಾಮಿ, ಮಂಜು, ಪುಟ್ಟ, ಶ್ರೀಧರ್, ಮಹ್ಮದ್ ಫಾರೂಖ್, ಕುಮಾರ್, ಸಿದ್ದು, ಸಂತು, ವಿನಯ್ ಇತರರು ಇದ್ದರು.