ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದ ಬಹಿರಂಗ ಸಮಾವೇಶವನ್ನುದ್ದೇಶಿಸಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. ಶಾಸಕ ಅಶೋಕ ಮನಗೂಳಿ, ಎಸ್.ಎಂ. ಪಾಟೀಲ ಗಣಿಹಾರ, ಅಬ್ದುಲ್‌ಹಮೀದ್ ಮುಶ್ರೀಫ್ ಮತ್ತಿತರರಿದ್ದಾರೆ.  
ಜಿಲ್ಲೆ

ಬಿಜೆಪಿ-ಜೆಡಿಎಸ್ ವಿರುದ್ಧ ಪ್ರತಿಭಟನೆ,ವಿಪಕ್ಷಗಳಿಗೆ ಸಿದ್ಧರಾಮಯ್ಯ ಪರಿಶುದ್ಧತೆ ಸಹಿಸಲಾಗುತ್ತಿಲ್ಲ ಎಂದ ಸಚಿವ ಶಿವಾನಂದ ಪಾಟೀಲ

ವಿಜಯಪುರ: ರಾಜ್ಯದಲ್ಲಿ ಕೇವಲ ಹಿಂಬಾಗಿಲ ಮೂಲಕವೇ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪರಿಶುದ್ಧ ಹಸ್ತದ ಸಿಎಂ ಸಿದ್ದರಾಮಯ್ಯ ಅವರನ್ನು ಕಂಡರೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಅವರ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿದು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಷಡ್ಯಂತ್ರ ರೂಪಿಸಿದ ಎಂದು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಕಾಂಗ್ರೆಸ್ ಮತ್ತು ಅಹಿಂದ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ‌್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ವಿನಾಕಾರಣ ಆಪಾದನೆ ಮಾಡಿ ಅವರ ವ್ಯಕ್ತಿತ್ವದ ತೇಜೋವಧೆ ಮಾಡಲಾಗುತ್ತಿದೆ, ಈ ವಿಷಯವಾಗಿ ರಾಜ್ಯಪಾಲರು ಸಹ ಏಕಪಕ್ಷೀಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಐದಾರು ರಾಜ್ಯಗಳಲ್ಲಿ ಬಿಜೆಪಿ ಪ್ರಜಾಪ್ರಭುತ್ವ ತತ್ವಕ್ಕೆ ವಿರುದ್ಧವಾದ ರೀತಿಯಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಸ್ಪಷ್ಟ ಬಹುಮತ ಪಡೆದು ಜನಹಿತದ ಉದ್ದೇಶ ಇರಿಸಿಕೊಂಡು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸಹ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ. ಮುಡಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಧರ್ಮಪತ್ನಿಗೆ ನ್ಯಾಯಯುತ ಹಾಗೂ ಕಾನೂನಿನ ಪರಿಧಿಯಲ್ಲಿಯೇ ಸೈಟ್ ಹಂಚಿಕೆಯಾಗಿದೆ, ಇಲ್ಲಿ ಹಗರಣ ನಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಈ ಹಿಂದೆಯೂ ಬಿಜೆಪಿ ಸರ್ಕಾರದಲ್ಲಿ ದೊಡ್ಡ ಹಗರಣಗಳೇ ನಡೆದಿವೆ, ಈ ಬಗ್ಗೆ ನಾವು ಪ್ರಶ್ನೆ ಮಾಡಿದ್ದೇವೆ, ಪಾದಯಾತ್ರೆ ನಡೆಸಲು ಮುಂದಾಗಿರುವ ಬಿಜೆಪಿ ನಾಯಕರು ನೈತಿಕತೆ ಇದ್ದರೆ ಈ ಸವಾಲುಗಳಿಗೆ ಉತ್ತರ ನೀಡಲಿ ನೋಡೋಣ ಎಂದು ಸವಾಲು ಹಾಕಿದರು.

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರರಾಗಿರುವ ಸಿದ್ಧರಾಮಯ್ಯ ಅವರು ಪ್ರಾಮಾಣಿಕ ಜನನಾಯಕ. ಈ ರೀತಿಯ ಜನನಾಯಕನ ಮೇಲೆ ಆಪಾದನೆ ಹೊರೆಸುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರೇ ಮೊದಲು ಭ್ರಷ್ಟರು. ಸಿದ್ಧರಾಮಯ್ಯ ಅವರ ಹೆಸರು ಸಹ ಹೇಳಲು ಅವರಿಗೆ ಯೋಗ್ಯತೆ ಇಲ್ಲ ಎಂದರು.
ಕೆಪಿಸಿಸಿ ಸದಸ್ಯ ಅಬ್ದುಲ್‌ಹಮೀದ್ ಮುಶ್ರೀಫ್ ಮಾತನಾಡಿ, ಈ ಹಿಂದೆ ಟ್ರೇನು, ವಿಮಾನ ಎಲ್ಲವನ್ನೂ ಮಾರಾಟ ಮಾಡುತ್ತಿರುವ ಮೋದಿಜಿ ಅವರ ಕಣ್ಣು ಈಗ ಉತ್ತಮ ಆಡಳಿತ ನಡೆಸುತ್ತಿರುವ ನಮ್ಮ ಕಾಂಗ್ರೆಸ್ ಸರ್ಕಾರದ ಮೇಲೆ ಬಿದ್ದಿದೆ, ಶಾಸಕರನ್ನು ಖರೀದಿಸಿ ಅಧಿಕಾರ ನಡೆಸುವುದು ಮಾತ್ರ ಬಿಜೆಪಿಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಮುಡಾದಲ್ಲಿ ಏನಾದರೂ ಭ್ರಷ್ಟಾಚಾರ ನಡೆದಿದ್ದರೆ ಅದು ನಡೆದಿದ್ದು ಬಿಜೆಪಿ ಆಡಳಿತದ ಕಾಲಘಟ್ಟದಲ್ಲಿ. ಸಾಮಾಜಿಕ ನ್ಯಾಯದ ಬದ್ಧತೆಯಿಂದ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ಅವರ ಜನಪ್ರಿಯತೆ ಸಹಿಸಿಕೊಳ್ಳದೇ ಆಧಾರ ರಹಿತ ಆಪಾದನೆ ಮಾಡಿ ಅವರ ಶಕ್ತಿಯನ್ನು ದಮನಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಬಿಜೆಪಿ-ಜೆಡಿಎಸ್ ನಾಯಕರು ಮಾಡುತ್ತಿದ್ದಾರೆ, ಆದರೆ ಮುಡಾ ಹಗರಣದಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಪಾತ್ರವೇ ಇದೆ ಹೊರತು ಸಿದ್ಧರಾಮಯ್ಯ ಅವರ ಎಳ್ಳಷ್ಟೂ ಪಾತ್ರವಿಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮೊಹ್ಮದ್‌ರಫೀಕ್ ಟಪಾಲ್, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮುಖಂಡರಾದ ಅಬ್ದುಲ್‌ರಜಾಕ್ ಹೊರ್ತಿ, ಮಹಾದೇವಿ ಗೋಕಾಕ, ಆರತಿ ಶಹಾಪೂರ, ಸಾಹೇಬಗೌಡ ಬಿರಾದಾರ, ಜಮೀರ್ ಭಕ್ಷಿ, ಷಹಜಾನ್ ಮುಲ್ಲಾ, ಶಬ್ಬೀರ್ ಜಹಾಗೀರದಾರ, ಫಯಾಜ್ ಕಲಾದಗಿ ಮತ್ತಿತರರಿದ್ದರು.

ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಜಾಥಾ ಮಹಾತ್ಮ ಗಾಂಧಿ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಆಗಮಿಸಿ ಸಮಾವೇಶವಾಗಿ ಮಾರ್ಪಟ್ಟಿತು. ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.