ಜಿಲ್ಲೆ

ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಆಕ್ರೋಶ: ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ನಗರದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ದ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆ ನಡೆಸಿದ ಹಿನ್ನೆಲೆಯಲ್ಲಿ ಕೆಲ ಸಮಯ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಹಲವು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಆರ್‌ಎಸ್‌ಎಸ್ ಅನ್ನು ರಾಜ್ಯದಲ್ಲಿ ಬ್ಯಾನ್ ಮಾಡುವಂತೆ ಆಗ್ರಹಿಸಿದರು.

ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆ ನಡೆಸದಂತೆ ಕ್ರಮ ವಹಿಸಲು ಹೇಳಿದ್ದನ್ನು ನಿಷೇಧಿಸಲಾಗಿದೆ ಎನ್ನುವಂತೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಬಿಂಬಿಸಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಚಿವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿರಂತರವಾಗಿ ಬೆದರಿಕೆ ನೀಡುವ ಕರೆಗಳು ಬರುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸಂವಿಧಾನ ವಿರೋಧಿಗಳಾದ ಮನುವಾದಿಗಳು ಮುಗಿಬಿದ್ದಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ದಲಿತ ಸಂಘಟನೆ ಮುಖಂಡ ಗುರುಪ್ರಸಾದ್ ಕೆರಗೋಡು, ಎಂ.ವಿ.ಕೃಷ್ಣ, ಶ್ರೀಧರ್, ದೊಡ್ಡಯ್ಯ, ಲವ, ಕಬ್ಬಾಳಯ್ಯ, ಹೊಂಬಯ್ಯ, ಹರೀಶ್, ಸಿ.ಎಂ.ದ್ಯಾವಪ್ಪ, ನರಸಿಂಹಮೂರ್ತಿ, ಗಂಗರಾಜು,ನಿರಂಜನ್, ನಾಗೇಶ್, ಭೈರ, ಕೆಂಪರಾಜು, ರಾಜೇಂದ್ರ ಇತರರಿದ್ದರು.